ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕೋಟೇಶ್ವರ ಕರ್ನಾಟಕ ಪಬ್ಲಿಕ್ ಸ್ಕೂಲ್ ಪದವಿ ಪೂರ್ವ ವಿಭಾಗದಲ್ಲಿ ಉಡುಪಿ ಜಿಲ್ಲಾ ಮಟ್ಟದ ರಾಜ್ಯಶಾಸ್ತ್ರ ವಿಷಯದ ಪುನಶ್ಚೇತನ ಕಾರ್ಯಕ್ರಮ ನಡೆಯಿತು.
ಕುಂದಾಪುರ ಭಂಡಾರ್ಕಾಕರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಾಕರಾಚಾರಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿಯಬೇಕಾದರೆ ಸಂವಿಧಾನದ ಒತ್ತಾಸೆಯಲ್ಲಿ ಜೀವನ ಮಾಡಬೇಕು. ಬಂದಂತಹ ಸವಾಲುಗಳನ್ನು ಮಾತುಕತೆಗಳ ಮೂಲಕ ಉಪನ್ಯಾಸಕರು ಸೇರಿ ಬಗೆಹರಿಸಿ ಭವ್ಯ ಭಾರತವನ್ನು ನಿರ್ಮಾಣ ಮಾಡಬೇಕು. ಆ ನಿಟ್ಟಿನಲ್ಲಿ ರಾಜ್ಯ ಶಾಸ್ತ್ರ ಉಪನ್ಯಾಸಕರು ಎಲ್ಲಾ ವಿದ್ಯಾರ್ಥಿಗಳೊಂದಿಗೆ ಸೇರಿ ಚಿಂತನ-ಮಂಥನ ಮಾಡಿ ಆ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುವ ಮೂಲಕ ಪ್ರಜಾಪ್ರಭುತ್ವದಲ್ಲಿ ಜವಾಬ್ದಾರಿಯುತವಾದ ವ್ಯಕ್ತಿಯಾಗಿ ರೂಪಿಸುವ ಹೊಣೆ ಪ್ರತಿಯೊಬ್ಬ ಉಪನ್ಯಾಸಕರ ಮೇಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟೇಶ್ವರ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲರಾದ ಪ್ರಕಾಶ್ ಶೆಟ್ಟಿ ವಹಿಸಿದ್ದರು.
ವೇದಿಕೆಯಲ್ಲಿ ಚಂದ್ರನಾಥ್ ಎಂ. ಸರ್ಕಾರಿ ಪದವಿ ಪೂರ್ವ ಕಾಲೇಜು ಚೇಳಾರು, ಅವರು ದ್ವಿತೀಯ ಪಿಯುಸಿ ವಿಷಯ ವಸ್ತುವನ್ನು, ಇಂದಿನ ಶೈಕ್ಷಣಿಕ ಸನ್ನಿವೇಶಗಳನ್ನು ಪಿಪಿಟಿಯ ಮೂಲಕ ಪ್ರಸ್ತುತಪಡಿಸಿದರು.
ಉಡುಪಿ ಜಿಲ್ಲಾ ಸಂಘದ ಅಧ್ಯಕ್ಷರಾದ ಎಡ್ವರ್ಡ್ ಲಾರ್ಸನ್ ಡಿಸೋಜ ಅವರು ಪ್ರಶ್ನೆ ಪತ್ರಿಕೆಯ ರೂಪರೇಶಿಗಳ ಬಗ್ಗೆ ಚರ್ಚಿಸಿದರು. ಗೌರವ ಅಧ್ಯಕ್ಷರಾದ ವಾಸು ಮೊಗವೀರ, ನಿವೃತ್ತ ರಾಜ್ಯಶಾಸ್ತ್ರ ಉಪನ್ಯಾಸಕ ಹಾಗೂ ಸಂಘದ ಹಿಂದಿನ ಅಧ್ಯಕ್ಷರಾದ ದಯಾನಂದ್ ಉಪಸ್ಥಿತರಿದ್ದರು.
ಬೈಂದೂರು ಕಾಲೇಜಿನ ಪ್ರಭಾರ ಪ್ರಾಚಾರ್ಯ ವೆಂಕಟರಮಣ ನಾಯಕ್ ಪ್ರಾರ್ಥಿಸಿದರು. ಉಪನ್ಯಾಸಕ ರಾಘವೇಂದ್ರ ಕಿಣಿ ಅತಿಥಿಗಳನ್ನು ಪರಿಚಯಿಸಿದರು. ಗೋಳಿಯಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿ, ರಾಜ್ಯಶಾಸ್ತ್ರ ಉಪನ್ಯಾಸಕ ಹರೀಶ್ ನಾಯಕ್ ಸ್ವಾಗತಿಸಿ, ಕೊಲ್ಲೂರು ಮೂಕಾಂಬಿಕಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಸಂಗೀತ ಶೆಟ್ಟಿ ವಂದಿಸಿದರು.
ವಿಶೇಷವಾಗಿ ಎಲ್ಲಾ ಉಪನ್ಯಾಸಕರಿಗೆ ಹಾಗೂ ರಾಜ್ಯಶಾಸ್ತ್ರದ ಎಲ್ಲಾ ವಿದ್ಯಾರ್ಥಿಗಳಿಗೆ ಸಂವಿಧಾನ ಓದು ಪುಸ್ತಕವನ್ನು ನೀಡಲು ಸಂಧ್ಯಾ ನಾಯಕ್ ಸರ್ಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ಇವರ ಸಹಕಾರಕ್ಕೆ ಅಭಿನಂದಿಸಲಾಯಿತು. ಈ ಕಾರ್ಯಕ್ರಮದ ಯಶಸ್ವಿಗೆ ಎಲ್ಲಾ ಉಪನ್ಯಾಸಕರು ಸಹಕಾರ ನೀಡಿದರು.















