ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಿಐಎಸ್‌ಸಿಇ ಗೇಮ್ಸ್ ಮತ್ತು ಸ್ಪೋರ್ಟ್ಸ್- 2025ರ ಅಂಗವಾಗಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ನಡೆದ ಪ್ರಾದೇಶಿಕ ಮಟ್ಟದ ಕೇರಮ್ ಟೂರ್ನಮೆಂಟ್ ಸ್ಪರ್ಧೆಯ ಉದ್ಘಾಟನಾ ಸಮಾರಂಭವು ಮಂಗಳವಾರ ನಡೆಯಿತು.
ಈ ಸ್ಪರ್ಧೆಯನ್ನು ಉಡುಪಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಲೋಕೇಶ್ ಸಿ. ವೈಜ್ಞಾನಿಕ ರೀತಿಯಲ್ಲಿ ಉದ್ಘಾಟಿಸಿ, ಮಾತನಾಡಿ, ಕ್ರೀಡೆ ವಿದ್ಯಾರ್ಥಿ ಜೀವನದ ಅವಿಭಾಜ್ಯ ಅಂಗ. ಸ್ಪರ್ಧೆಗಳು ಆರೋಗ್ಯಕರವಾಗಿರಬೇಕು. ಇಂದಿನ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ದೀಕ್ಷಿತಾ ಆರ್ ಗೌಡ ಅವರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ ಚಾಂಪಿಯನ್ ಆಗಿದ್ದಾರೆ. ಅವರ ಸಾಧನೆ ನಮ್ಮ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಿದೆ. ಸೋಲು ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸಬೇಕು. ಸೋಲೇ ಗೆಲುವಿನ ಸೋಪಾನ. ಸಾಧಕನಿಗೆ ಮುಂದಿನ ಹಂತದಲ್ಲಿ ಅವಕಾಶಗಳು ಇದ್ದೇ ಇರುತ್ತವೆ. ಅವುಗಳನ್ನು ಸಮರ್ಥವಾಗಿ ಎದುರಿಸಲು ಸೋಲೂ ಪಾಠವಾಗಿರುತ್ತದೆ. ಸಿಕ್ಕ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವವನೇ ಸಾಧನೆಯನ್ನು ಮಾಡಲು ಸಾಧ್ಯ ಎಂದರು.
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ ಚಾಂಪಿಯನ್ ದೀಕ್ಷಿತಾ ಆರ್ ಗೌಡ ಅವರು ಮಾತನಾಡಿ, ಯಾವುದೇ ಕ್ಷೇತ್ರದಲ್ಲಿಯಾಗಲಿ ಕಷ್ಟಪಡದೆ ಸಾಧನೆ ಅಸಾಧ್ಯ. ಕ್ರೀಡೆಯು ಆರೋಗ್ಯವನ್ನು ವೃದ್ಧಿಸುವುದರೊಂದಿಗೆ ದೇಶದ ಕೀರ್ತಿಯನ್ನು ಹೆಚ್ಚಿಸುವ ಕಾಯಕವಾಗುವುದು. ನನ್ನ ಜೀವನದಲ್ಲಿ ತಂದೆ ತಾಯಿಯರ ಸಹಕಾರವಿಲ್ಲದೆ ಈ ಸಾಧನೆ ಅಸಾಧ್ಯವಾಗಿತ್ತು. ಅವರ ಪ್ರೋತ್ಸಾಹವೇ ತನ್ನೀ ಸಾಧನೆಗಳಿಗೆ ಮೂಲಕಾರಣವೆಂದು ತಿಳಿಸುತ್ತಾ ವಿದ್ಯಾರ್ಥಿಗಳನ್ನು ಸ್ಪರ್ಧೆಗೆ ಹುರಿದುಂಬಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ, ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಉಪಾಧ್ಯಕ್ಷರಾದ ವೇದಮೂರ್ತಿ ಹೆಚ್. ಬಾಲಚಂದ್ರ ಭಟ್ ಮಾತನಾಡಿ, ಸಾಧಿಸುವ ಛಲವಿಲ್ಲದಿದ್ದರೆ ಸಾಧನೆ ಅಸಾಧ್ಯ. ಅಚಲವಾದ ಶ್ರದ್ಧೆ, ಅಭ್ಯಾಸಗಳೇ ಸಾಧನೆಗಳಿಗೆ ಕಾರಣವಾಗುವವು ಎಂದರು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಮತ್ತು ಸಿದ್ಧಿವಿನಾಯಕ ವಸತಿ ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ ಮಾತನಾಡಿ, ಕೇರಮ್ ಆಟವು ನಮ್ಮ ಏಕಾಗ್ರತೆಯನ್ನು ಹೆಚ್ಚಿಸುವ ಒಂದು ಆಟವಾಗಿದ್ದು, ಸಮಯ ಸಿಕ್ಕಾಗ ಆಟವಾಡುವುದು ನಮ್ಮನ್ನು ಕ್ರಿಯಾಶೀಲರನ್ನಾಗಿಸುತ್ತದೆ. ಇಂತಹ ಸ್ಪರ್ಧೆಯನ್ನು ನಮ್ಮಲ್ಲಿ ಆಯೋಜಿಸಿದ್ದು, ಯೋಗ್ಯರಾದ ಆಟಗಾರರ ಆಯ್ಕೆಯಾಗಲಿ. ಎಂದು ಹಾರೈಸಿದರು. ಮುಖ್ಯ ತೀರ್ಪುಗಾರರಾಗಿ ಆಗಮಿಸಿದ ಪ್ರತಾಪ್ ಸಿಂಗ್ ಕೆ. ಮಾತನಾಡುತ್ತಾ ಜೀವನದಲ್ಲಿ ನಿಯಮಗಳಿಗೆ ಬದ್ಧರಿದ್ದರಷ್ಟೇ ಯಶಸ್ಸು ಸಿಗುವಂತೆ ಈ ಕೇರಮ್ ಆಟ ವಿದ್ಯಾರ್ಥಿಗಳಿಗೆ ನಿಯಮಬದ್ಧತೆಯನ್ನು ತಿಳಿಸಿಕೊಡುತ್ತದೆ ಎಂದರು.
ವೇದಿಕೆಯಲ್ಲಿ ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮಿ ಎಮ್., ಶಾಲಾ ಉಪಪ್ರಾಂಶುಪಾಲರಾದ ರಾಮ ದೇವಾಡಿಗ ಮತ್ತು ವಿವಿಧ ಶಾಲೆಗಳ ಅಧ್ಯಾಪಕರು, ಸ್ಪರ್ಧಾರ್ಥಿಗಳು, ಶಾಲಾ ಶಿಕ್ಷಕ ಶಿಕ್ಷಕೇತರವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಅದಿತಿ ಬಿ. ಶೆಟ್ಟಿ ನಿರ್ವಹಿಸಿದರೆ, ವಿದ್ಯಾರ್ಥಿನಿ ಸನ್ನಿಧಿ ಅಡಿಗ ಸ್ವಾಗತಿಸಿ, ವಿದ್ಯಾರ್ಥಿ ಸ್ಕಂದ ಉಡುಪ ಧನ್ಯವಾದವನ್ನು ಸಮರ್ಪಿಸಿದರು.















