ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಶ್ರೀ ಗುರುನರಸಿಂಹ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಸಾಲಿಗ್ರಾಮ ಇದರ 15ನೇಯ ವಾರ್ಷಿಕ ಸಾಮಾನ್ಯ ಸಭೆಯು ಇತ್ತೀಚಿಗೆ ಸಾಲಿಗ್ರಾಮದ ಗಿರಿಜಾ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಜರಗಿತು.
ಶ್ರೀ ಗುರುನರಸಿಂಹ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಅಧ್ಯಕ್ಷ ಆನಂದ ಸಿ. ಕುಂದರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಗತ ವರ್ಷದಲ್ಲಿ ಸಂಘವು ಸದಸ್ಯರಿಂದ ರೂ. 15.00 ಕೋಟಿಗೂ ಅಧಿಕ ಠೇವಣಿ ಸಂಗ್ರಹಿಸಿ ರೂ. 14.00 ಕೋಟಿಗೂ ಅಧಿಕ ಸಾಲ ವಿತರಿಸಿದ್ದು ಶೇ. 99.76ರ ವಸೂಲಾತಿ ಕ್ರಮಗಳನ್ನು ಕೈಗೊಂಡಿದೆ. ಸಂಘವು ಆರಂಭದಿಂದಲೂ ಪ್ರಜ್ಞಾವಂತ ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆ, ದಕ್ಷ ಆಡಳಿತ ಮಂಡಳಿಯ ಮಾರ್ಗದರ್ಶನ ಮತ್ತು ನಿಷ್ಟಾವಂತ ಸಿಬಂಧಿಯವರ ಪ್ರಾಮಾಣಿಕ ಸೇವೆಯಿಂದ ಲಾಭದಲ್ಲಿ ಮುನ್ನಡೆಯುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಪ್ರಸ್ತುತ ಸಾಲಿನಲ್ಲಿ ಸಂಘಕ್ಕೆ ಸುಸ್ಸಜ್ಜಿತ ಕಟ್ಟಡ ನಿರ್ಮಿಸಿ ಮುಂದಿನ ಸಾಲಿನಿಂದ ವಾರ್ಷಿಕ ಸಾಮಾನ್ಯ ಸಭೆಯನ್ನು ಸಂಘದ ಕಟ್ಟಡದಲ್ಲಿಯೇ ಜರುಗಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿ ಸಂಘದ ವಿವಿಧ ಸೇವೆಗಳ ಸದುಪಯೋಗ ಪಡೆಯುವಂತೆ ಕರೆಯಿತ್ತರು.

ಇದೇ ವೇಳೆ 2024- 25ನೇ ಶೈಕ್ಷಣಿಕ ವರ್ಷದಲ್ಲಿ ಪಿ.ಯು.ಸಿ ಮತ್ತು ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಶಾಲಾವಾರು ವಿಧ್ಯಾರ್ಥಿ ವಿಧ್ಯಾರ್ಥಿನಿಯರು ಮತ್ತು ಸದಸ್ಯರ ಮಕ್ಕಳನ್ನು ಪುರಸ್ಕರಿಸಿ ಅಭಿನಂದಿಸಲಾಯಿತು.
ಸಂಘದ ಕಾರ್ಯ ಕ್ಷೇತ್ರದಲ್ಲಿ ಫಲಾಪೇಕ್ಷೆ ಇಲ್ಲದೇ ನಿಸ್ವಾರ್ಥ ಪ್ರಶಂಸನೀಯ ಸೇವೆ ಸಲ್ಲಿಸುತ್ತಿರುವ ಹಲವು ಹಿರಿಯ ನಾಗರಿಕರುಗಳನ್ನು ಗೌರವಿಸಿ ಅಭಿನಂದಿಸಲಾಯಿತು.
ಕಳೆದ ಸಾಲಿನಲ್ಲಿ ಗಳಿಸಿದ ನಿವ್ವಳ ಲಾಭ ರೂ. 32.50 ಲಕ್ಷವನ್ನು ಉಪವಿಧಿಯಲ್ಲಿನ ಅವಕಾಶದಂತೆ ವಿಂಗಡಿಸಿ ಸದಸ್ಯರಿಗೆ ಶೇ. 25ರ ಪಾಲು ಲಾಭವನ್ನು ನೀಡಲಾಯಿತು. ಕಳೆದ ಹತ್ತು ವರ್ಷಗಳಿಂದ ನಿರಂತರ ಶೇ. 25ರ ಗರಿಷ್ಟ ಲಾಭಾಂಶ ನೀಡಿ ಪ್ರಾಥಮಿಕ ರಂಗದಲ್ಲಿ ದಾಖಲೆ ನಿರ್ಮಿಸಿದೆ.
ಸಭೆಯಲ್ಲಿ ಸಂಘದ ಎಲ್ಲಾ ನಿರ್ದೇಶಕರುಗಳು, ಸಭಾ ಕಾರ್ಯಸೂಚಿಯಂತೆ ವಿಷಯವನ್ನು ಮಂಡಿಸಿ ವಿವರಣೆಗಳನ್ನು ನೀಡಿ ಆನುಮೋದನೆ ಪಡೆದರು. ಸಭೆಯಲ್ಲಿ ನಿರ್ದೇಶಕರುಗಳಾದ ಸಂಜೀವ ಜಿ, ಮಂಜುನಾಥ ಎಸ್.ಕೆ, ಡಾ. ಕೆ ಕೃಷ್ಣ ಕಾಂಚನ್, ಕೆ ಶಂಕರ ಬಂಗೇರ, ವಸಂತ ಶೆಟ್ಟಿ, ವೈ ಕೃಷ್ಣಮೂರ್ತಿ ಐತಾಳ, ಸವಿತಾ ಎಸ್ ಪೂಜಾರಿ, ಶಾಂತಾ ಭಟ್ಟ, ನಾಗರತ್ನ ಬಾಯರಿ, ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಜಿ. ಎಸ್. ಸೋಮಯಾಜಿ ಗತ ವರ್ಷದ ವರದಿ ಮಂಡಿಸಿದರು. ಶಾಂತಾ ಭಟ್ಟ ನಿರ್ದೇಶಕಿ ವಂದನಾರ್ಪಣೆಗೈದರು.















