ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: 15ನೇ ಆವೃತ್ತಿಯ `ಆಳ್ವಾಸ್ ಪ್ರಗತಿ’ ಬೃಹತ್ ಉದ್ಯೋಗ ಮೇಳ ಇತ್ತೀಚಿಗೆ ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ಸಮಾಪನಗೊಂಡಿತು. ಎರಡು ದಿನಗಳ ಕಾಲ ನಡೆದ ಉದ್ಯೋಗ ಮೇಳದಲ್ಲಿ 2873 ಉದ್ಯೋಗಾಕಾಂಕ್ಷಿಗಳನ್ನು ಸ್ಥಳದಲ್ಲಿಯೇ ನೇಮಕಾತಿ ಮಾಡಿಕೊಳ್ಳಲಾಯಿತು. ಭಾಗವಹಿಸಿದ ಒಟ್ಟು 288 ಕಂಪನಿಗಳ ಪೈಕಿ 260 ಕಂಪೆನಿಗಳು, 3734 ಜನರನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಿವೆ. ಒಟ್ಟು 14,245 ಅಭ್ಯರ್ಥಿಗಳು 2 ದಿನದ ಆಳ್ವಾಸ್ ಪ್ರಗತಿ ಉದ್ಯೋಗ ಮೇಳದಲ್ಲಿ ಭಾಗವಹಿಸಿದರು.
ದುಬೈ ಮೂಲದ ಫಾರ್ಚುನ್ ಸಂಸ್ಥೆಯು 5 ಅಭ್ಯರ್ಥಿಗಳನ್ನು 5 ರಿಂದ 8 ಲಕ್ಷ ವಾರ್ಷಿಕ ವೇತನದ ಹುದ್ದೆಗೆ ಆಯ್ಕೆ ಮಾಡಿದ್ದು, 25 ಅಭ್ಯರ್ಥಿಗಳು ಮುಂದಿನ ಹಂತಕ್ಕೆ ಆಯ್ಕೆಗೊಂಡಿದ್ದಾರೆ.. ನಾರಾಯಣ ಹೃದಯಾಲಯವು 43 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ ಮತ್ತು ಅಂತಿಮ ಸುತ್ತಿನ ಸಂದರ್ಶನಕ್ಕೆ 28 ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಿದೆ. ಝೀ ಎಂಟರ್‌ಟೈನ್‌ಮೆಂಟ್ ಕಂಪೆನಿಯು ಅಂತಿಮ ಸುತ್ತಿಗೆ 11 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಸೌದಿ ಅರೇಬಿಯಾ ಮೂಲದ ಎಕ್ಪರ್ಟೈಸ್ ಕಂಪೆನಿಯು 37 ಜನರನ್ನು ನೇಮಿಸಿಕೊಂಡಿದೆ.
ಮುಂಬೈ ಮೂಲದ ಆಲ್‌ಕಾರ್ಗೋ ಲಾಜಿಸ್ಟಿಕ್ಸ್ 3 ರಿಂದ 5 ಲಕ್ಷ ವರೆಗಿನ ವಾರ್ಷಿಕ ವೇತನವಿರುವ ಹುದ್ದೆಗಳಿಗೆ 9 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ತೇಜಸ್ವಿನಿ ಗ್ರೂಪ್ಸ್ ವಾರ್ಷಿಕ 6 ಲಕ್ಷ ಪ್ಯಾಕೇಜ್‌ಗೆ 11 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಇನ್‌ಫೋಸಿಸ್ ಬಿಪಿಎಂ ಕಂಪೆನಿಯು 79 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಕೋಡ್‌ಯಂಗ್ ಸಂಸ್ಥೆಯು 20 ಅಭ್ಯರ್ಥಿಗಳನ್ನು 4.36 ದಿಂದ 8.36 ಲಕ್ಷದ ವಾರ್ಷಿಕ ವೇತನಕ್ಕೆ ಆಯ್ಕೆ ಮಾಡಿಕೊಂಡಿದೆ. ಕೆ12 ಟೆಕ್ನೋ ಸರ್ವೀಸ್ ಕಂಪೆನಿಯು 42 ಅಭ್ಯರ್ಥಿಗಳನ್ನು ವಾರ್ಷಿಕ 6 ಲಕ್ಷದ ವೇತನದೊಂದಿಗೆ ನೇರ ನೇಮಕಾತಿ ಮಾಡಿಕೊಂಡಿದೆ.
ನೂರಾರು ಕಂಪನಿಗಳು ಒಂದೇ ಸೂರಿನಡಿ ಬಂದಿರುವುದು ವಿದ್ಯಾರ್ಥಿಗಳಾಗಿ ನಮಗೆ ಬಹಳ ಖುಷಿ ನೀಡಿದೆ. ಬಹಳಷ್ಟು ಅವಕಾಶಗಳು ಇಲ್ಲಿ ಸಿಕ್ಕಿದ್ದರಿಂದ ನಮ್ಮ ಆಸಕ್ತಿಗೆ ತಕ್ಕ ಕಂಪನಿಯಲ್ಲಿ ಸಂದರ್ಶನ ನೀಡಲು ಸಾಧ್ಯವಾಯಿತು. ಗಲ್ಫ್ ದೇಶದಲ್ಲಿ ಕೆಲಸ ಮಾಡಲು ಸೂಕ್ತವಾದ ಕೋರ್ ಮೆಕ್ಯಾನಿಕಲ್ ಕಂಪನಿಯಲ್ಲಿ ಅವಕಾಶ ಕಂಡುಕೊಳ್ಳುವ ಬಗ್ಗೆ ಉತ್ಸುಕನಾಗಿದ್ದೆ. ಸಾರಿಗೆ ಮತ್ತು ವಸತಿಯೊಂದಿಗೆ ನಾನು ಎಕ್ಸ್ಪರ್ಟೈಸ್ ಕಂಪೆನಿಗೆ ಆಯ್ಕೆಯಾಗಿರುವುದರಿಂದ ಕಂಪನಿಯು ನಡೆಸುವ ತರಬೇತಿ ಅವಧಿಯನ್ನು ಎದುರು ನೋಡುತ್ತಿದ್ದೇನೆ.
–ಲೆಸ್ಟನ್ ಪಿಂಟೋ
ಪದವಿ ಮುಗಿದ ತಕ್ಷಣ ಫ್ರೆಷರ್‌ಗಳಿಗೆ ಉತ್ತಮ ವಾರ್ಷಿಕ ಪ್ಯಾಕೇಜ್ ಸಿಗುತ್ತಿದೆ ಎಂದರೆ ನಂಬಲು ಆಗುತ್ತಿಲ್ಲ. ಹೈಸ್ಕೂಲ್‌ನಿಂದ ಸ್ನಾತಕೋತ್ತರ ಪದವಿವರೆಗೂ ಆಳ್ವಾಸ್ ವಿದ್ಯಾರ್ಥಿಯಾಗಿದ್ದರಿಂದ ವಿವಿಧ ಕಂಪನಿಗಳಿಗೆ ಸಂದರ್ಶನ ನೀಡಲು ಬಹಳ ಧೈರ್ಯ ಬಂತು. ನಾನು ಕೋಡ್‌ಯಂಗ್ ಕಂಪೆನಿಗೆ ಆಯ್ಕೆಯಾಗಿರುವುದು ಖುಷಿ ನೀಡಿದೆ. ಈ ಉದ್ಯೋಗ ಮೇಳವು ಬಹಳ ಅಚ್ಚುಕಟ್ಟಾಗಿ ಆಯೋಜನೆಗೊಂಡಿದ್ದು, ಇದಕ್ಕಾಗಿ ನಾನು ಆಳ್ವಾಸ್‌ಗೆ ಅಭಾರಿಯಾಗಿದ್ದೇನೆ.
– ಅನುಶ್ರೀ, ಮೂಡುಬಿದಿರೆ










