ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ನಂದನವನ ಮಹಾಬಲೇಶ್ವರ – ಕೆರ್ಗಾಲ್ ಎಂಬ ಗ್ರಾಮದಲ್ಲಿ ಜನಿಸಿದ ಪಲ್ಲವಿ ದೇವಾಡಿಗ ಎಂಬ ಗ್ರಾಮೀಣ ಪ್ರತಿಭೆ, ಇಂದು ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ.
ಮಧ್ಯಮವರ್ಗದ ಕೃಷಿಕ ಕುಟುಂಬದಿಂದ ಬಂದ ಪಲ್ಲವಿ, ಬಾಲ್ಯದಿಂದಲೇ ಕ್ರೀಡೆಗೆ ಆಸಕ್ತಿ ತೋರುತ್ತಿದ್ದರು. ಸರಕಾರಿ ಶಾಲಾ ಮಟ್ಟದಲ್ಲಿ ಆರಂಭವಾದ ಈ ಉತ್ಸಾಹ ಇಂದು ರಾಷ್ಟ್ರಮಟ್ಟದ ಪದಕಗಳವರೆಗೆ ತಲುಪಿರುವುದು ವಿಶೇಷ. ನೆಟ್‌ಬಾಲ್ ಹಾಗೂ ಹ್ಯಾಂಡ್‌ಬಾಲ್ ಕ್ರೀಡೆಗಳಲ್ಲಿ ಸಕ್ರಿಯರಾಗಿರುವ ಅವರು, ಹಲವಾರು ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಯಶಸ್ವಿಯಾಗಿ ಭಾಗವಹಿಸಿ ಶ್ರೇಷ್ಠ ಸಾಧನೆ ಮಾಡಿದ್ದಾರೆ.
ಪಲ್ಲವಿ ಅವರು ಪ್ರಸ್ತುತ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜಿರೆಯಲ್ಲಿ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿ ವಿದ್ಯಾಭ್ಯಾಸ ಮುಂದುವರಿಸುತ್ತಿದ್ದಾರೆ. ವಿದ್ಯಾರ್ಥಿ ಜೀವನ ಮತ್ತು ಕ್ರೀಡಾ ಸಾಧನೆ ಇವೆರಡನ್ನೂ ಸಮತೋಲನದಿಂದ ನಿರ್ವಹಿಸುತ್ತಿರುವ ಈ ಪ್ರತಿಭೆಗೆ ಶ್ಲಾಘನೆ ಮಾಡಲೇ ಬೇಕು. ಅವರ ಪೋಷಕರು ಕೃಷ್ಣ ದೇವಾಡಿಗ ಮತ್ತು ಸೀತಾ ದೇವಾಡಿಗ ಕೃಷಿಕರಾಗಿದ್ದು, ಸೀಮಿತ ಸಂಪತ್ತಿನಲ್ಲೂ ಪುತ್ರಿಯ ಪ್ರತಿಭೆಯನ್ನು ಬೆಳೆಸುವಲ್ಲಿ ಅಪಾರ ಶ್ರಮಹೊಂದಿದ್ದಾರೆ.
ಈಕೆಯ ಪ್ರಮುಖ ಕ್ರೀಡಾ ಸಾಧನೆಗಳು:
ಅಖಿಲ ಭಾರತ ನೆಟ್‌ಬಾಲ್ ಚಾಂಪಿಯನ್‌ಶಿಪ್ ಕೇರಳ ಹಾಗೂ ಜೈಪುರನಲ್ಲಿ ಆಯೋಜಿಸಲಾದ ಈ ಟೂರ್ನಿಗಳಲ್ಲಿ ಪ್ರತಿನಿಧಿಸಿರುವ ಪಲ್ಲವಿ, ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಯಾಗಿ ಸ್ಥಾಪಿಸಿದ್ದಾರೆ. ತಮಿಳುನಾಡಿನಲ್ಲಿ ನಡೆದ ಸೌತ್ ಜೋನ್ ಟೂರ್ನಿನಲ್ಲಿ ಭಾಗವಹಿಸಿ ಕಂಚಿನ ಪದಕ ಪಡೆದಿದ್ದಾರೆ.
ಪಂಜಾಬ್ ಯೂನಿವರ್ಸಿಟಿ, ಚಂಡೀಗಢನಲ್ಲಿ ನಡೆದ ಇಂಟರ್‌ಜೋನಲ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ರಾಜ್ಯದ ಕೀರ್ತಿಯನ್ನು ಎತ್ತಿ ಹಿಡಿದಿದ್ದಾರೆ. ಮಧ್ಯಪ್ರದೇಶದಲ್ಲಿ ನಡೆದ ಜೂನಿಯರ್ ನ್ಯಾಷನಲ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಪಡೆದಿರುವ ಪಲ್ಲವಿ, ನಂತರ ನಡೆದ ಫಾಸ್ಟ್ ಫೈವ್ ವಿಭಾಗದಲ್ಲೂ ಭಾಗವಹಿಸಿದ್ದಾರೆ.
ಸೌತ್ ಜೋನ್ ಹ್ಯಾಂಡ್‌ಬಾಲ್ ಟೂರ್ನಿ (ತಮಿಳುನಾಡು) – ಹ್ಯಾಂಡ್‌ಬಾಲ್‌ನಲ್ಲಿಯೂ ತಮ್ಮ ಪ್ರತಿಭೆಯನ್ನು ತೋರಿಸಿ, ಮಲ್ಟಿ ಟ್ಯಾಲೆಂಟೆಡ್ ಕ್ರೀಡಾಪಟು ಎಂಬ ಹೆಸರಿಗೆ ನಿಲುಕಿದ್ದಾರೆ.
ಮೈಸೂರಿನ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ – ನೆಟ್‌ಬಾಲ್‌ನಲ್ಲಿ ದ್ವಿತೀಯ ಸ್ಥಾನ ಮತ್ತು ಹ್ಯಾಂಡ್‌ಬಾಲ್‌ನಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟದ ಕೀರ್ತಿಗೆ ಪಾತ್ರರಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ಹಿರಿಯ ರಾಷ್ಟ್ರಮಟ್ಟದ ಹಾಗೂ ಮಿಕ್ಸ್ಡ್ ನೆಟ್‌ಬಾಲ್ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಮಿನಿ ಒಲಿಂಪಿಕ್ಸ್ ಚಾಂಪಿಯನ್‌ಶಿಪ್ ನಲ್ಲಿ ಕಂಚಿನ ಪದಕ ಸಹಿತ ಇನ್ನೂ ಹಲವು ಸ್ಪರ್ಧೆಗಳಲ್ಲಿ ಅವರು ಭಾಗವಹಿಸಿದ್ದಾರೆ.
ಇವು ಕೇವಲ ಪದಕಗಳ ಪಟ್ಟಿಯಲ್ಲ, ಈ ಸಾಧನೆಗಳ ಹಿಂದೆ ಇರುವ ಪರಿಶ್ರಮ, ಶಿಸ್ತು, ತ್ಯಾಗ ಹಾಗೂ ಧೈರ್ಯವಿದೆ. ಪ್ರತಿದಿನವೂ ಶ್ರದ್ಧೆಯಿಂದ ನಡೆಸುವ ಅಭ್ಯಾಸ, ಪೋಷಕರ ಬೆಂಬಲ, ಶಿಕ್ಷಕರ ಮಾರ್ಗದರ್ಶನ ಹಾಗೂ ಸ್ವಯಂ ಶಕ್ತಿ ಈ ಎಲ್ಲದಕ್ಕೂ ಕಾರಣಕಾರಿಯಾಗಿವೆ.
ಪಲ್ಲವಿ ದೇವಾಡಿಗ ಅವರು ಕೇವಲ ಕ್ರೀಡಾಪಟು ಮಾತ್ರವಲ್ಲ, ಇತರ ವಿದ್ಯಾರ್ಥಿಗಳಿಗೆ — ವಿಶೇಷವಾಗಿ ಗ್ರಾಮೀಣ ಭಾಗದ ಹುಡುಗಿಯರಿಗೆ ಪ್ರೇರಣಾದಾಯಕ ಮಾದರಿಯಾಗಿದ್ದಾರೆ.
ಭಾರತೀಯ ತ್ರಿವರ್ಣಧ್ವಜವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾರಿಸಲು ಸಜ್ಜಾಗಿರುವ ಗ್ರಾಮೀಣ ಕ್ರೀಡಾ ಪಟುಗೆ ನಿಮ್ಮ ಬೆಂಬಲ ಬೇಕಾಗಿದೆ.
ತಂದೆ ಹೋಟೆಲ್‌ನಲ್ಲಿ ದುಡಿದು ಸಂಸಾರ ಸಾಗಿಸುತ್ತಿರುವ, ಈಗಲೋ ಆಗಲೋ ಕುಸಿಯುವ ಮಣ್ಣಿನ ಗೋಡೆಯ ಮನೆಯಲ್ಲಿ ಬದುಕುತ್ತಿರುವ ಈ ಗ್ರಾಮೀಣ ಕ್ರೀಡಾ ಪಟು, ತನ್ನ ಪರಿಶ್ರಮ, ಸಮರ್ಪಣೆ ಮತ್ತು ಅಜೇಯ ಚೇತನದ ಬಲದಿಂದ ಅಂತರಾಷ್ಟ್ರೀಯ ಕ್ರೀಡಾ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಸಜ್ಜಾಗಿದ್ದಾಳೆ.
ಇಂತಹ ಪ್ರತಿಭೆಗಳಿಗೆ ಸರ್ಕಾರದಿಂದ ಉತ್ತೇಜನ, ಸಮಾಜದಿಂದ ಬೆಂಬಲ ಮತ್ತು ನಮ್ಮೆಲ್ಲರ ಮೆಚ್ಚುಗೆಯ ಅಗತ್ಯವಿದೆ. ಈ ಹುಡುಗಿಯ ಕನಸು ಕೇವಲ ಅವಳದೇ ಅಲ್ಲ – ಅದು ನಮ್ಮ ದೇಶದ ಗೌರವ, ಹೆಮ್ಮೆ ಮತ್ತು ಭವಿಷ್ಯದ ಪ್ರತೀಕವಾಗಿದೆ. ಅವಳು ಭವಿಷ್ಯದಲ್ಲಿ ಅಂತರರಾಷ್ಟ್ರೀಯ ವೇದಿಕೆಯಲ್ಲಿ ತ್ರಿವರ್ಣಧ್ವಜ ಹಾರಿಸುತ್ತಾಳೆ ನಂಬಿಕೆ ಇದೆ.
ಆದರೆ ಪ್ರಶಂಸೆಯಿಂದ ಹೊರತಾಗಿ, ಅವಳ ಹಾದಿಯಲ್ಲಿ ನೈಜ ನೆರವು ಬೇಕಾಗಿದೆ. ಆರ್ಥಿಕ ಸಹಾಯ, ತಾಂತ್ರಿಕ ಮಾರ್ಗದರ್ಶನ ಮತ್ತು ನೈತಿಕ ಬೆಂಬಲ ನೀಡುವುದು ನಮ್ಮೆಲ್ಲರ ಜವಾಬ್ದಾರಿ. ಸ್ಥಳೀಯ ಸಂಘ-ಸಂಸ್ಥೆಗಳು, ಸಮಾಜದ ಪ್ರಭಾವಿಗಳು ಮತ್ತು ಸಹಾನುಭೂತಿ ಹೊಂದಿದ ಸಾರ್ವಜನಿಕರು ಈ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕಾಗಿದೆ.















