ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ನೀಡಿದ ಸಂದೇಶವನ್ನು ಪ್ರತಿಯೊಬ್ಬರೂ ಪಾಲಿಸಿ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಗೀತೆಯ ಸಾರ ನಮ್ಮ ಜೀವನಕ್ಕೆ ಅತ್ಯವಶ್ಯಕವಾಗಿದೆ. ಮಕ್ಕಳು ನಮ್ಮನ್ನು ಅನುಕರಣೆ ಮಾಡುತ್ತಾರೆ, ನೋಡಿ ಕಲಿಯುತ್ತಾರೆ. ಆದ್ದರಿಂದ ಹಿರಿಯರು ಉತ್ತಮ ಸಂಸ್ಕಾರಗಳನ್ನು ಮಕ್ಕಳಿಗೆ ನೀಡಬೇಕು. ಚಂಚಲ ಮನಸ್ಸಿನ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದರೆ ಅವರು ದಾರಿ ತಪ್ಪುದನ್ನು ತಡೆಯಬಹುದು ಮತ್ತು ಅವರ ಜೀವನವನ್ನು ಉತ್ತಮ ಸ್ಥಿತಿಗೆ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂದು ಸೇವಾ ಸಂಗಮ ಟ್ರಸ್ಟ್‌ನ ವಿಶ್ವಸ್ಥೆ ಕಲ್ಪನಾ ಭಾಸ್ಕರ ಹೇಳಿದರು.
ಸೇವಾ ಸಂಗಮ ನಿವೇದಿತಾ ಶಿಶು ಮಂದಿರ ಗಂಗೊಳ್ಳಿ ಇದರ ವತಿಯಿಂದ ರೋಟರಿ ಕ್ಲಬ್ ಗಂಗೊಳ್ಳಿ ಮತ್ತು ಜೇಸಿಐ ಗಂಗೊಳ್ಳಿ ಸಹಯೋಗದೊಂದಿಗೆ ಗಂಗೊಳ್ಳಿಯ ಶ್ರೀ ವೀರವಿಠಲ ಸಭಾಗೃಹದಲ್ಲಿ ಶನಿವಾರ ನಡೆದ 39ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಬೌದ್ಧಿಕ್ ನೀಡಿದರು.

ಮಕ್ಕಳಲ್ಲಿ ಭಗವಂತನ ಮೇಲೆ ಶ್ರದ್ಧಾ ಭಕ್ತಿಯನ್ನು ಬೆಳೆಸಿದರೆ ಅವರು ಸನ್ಮಾರ್ಗದಲ್ಲಿ ಮುನ್ನಡೆದು ಸತ್ಪ್ರಜೆಗಳಾಗಿ ಸಮಾಜದಲ್ಲಿ ಜೀವಿಸಲು ಸಾಧ್ಯವಿದೆ. ಪರಿಸರ ಪ್ರಜ್ಞೆಯನ್ನು ಜಾಗೃತಗೊಳಿಸಿಕೊಳ್ಳಬೇಕು. ಸಜ್ಜನರ ಮೌನ ದುರ್ಜನರಿಗೆ ಉಪಯೋಗವಾಗುವಂತೆ ಮಾಡುತ್ತಿದೆ. ಹಿಂದುಗಳಲ್ಲಿ, ಭಾರತೀಯ ಪ್ರಜೆಗಳಲ್ಲಿ ಧಾರ್ಮಿಕ ಪ್ರಜ್ಞೆ ಜಾಗೃತಿಯಾಗುತ್ತಿರುವುದನ್ನು ಸಹಿಸಿಕೊಳ್ಳಲಾಗದ ದುಷ್ಟ ಶಕ್ತಿಗಳು ಹಿಂದುಗಳ ಧಾರ್ಮಿಕ ಶ್ರದ್ಧೆಯನ್ನು ನಾಶಗೊಳಿಸುವ ಹುನ್ನಾರ ನಡೆಸುತ್ತಿವೆ. ಸಜ್ಜನ ಸಮಾಜ ಜಾಗೃತರಾಗಿ ದೇಶದ ಬಗ್ಗೆ ಚಿಂತನೆ ಮಾಡಬೇಕು. ದೇಶದ ಒಟ್ಟಿಗೆ ನಾವೆಲ್ಲರೂ ನಿಲ್ಲಬೇಕಿದೆ ಎಂದರು.
ಕೆನರಾ ಬ್ಯಾಂಕಿನ ನಿವೃತ್ತ ಡಿಜಿಎಂ ರತ್ನಾಕರ ಗಾಣಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ಗಂಗೊಳ್ಳಿ ಅಧ್ಯಕ್ಷ ಕೃಷ್ಣ ಪೂಜಾರಿ ಮತ್ತು ಜೇಸಿಐ ಗಂಗೊಳ್ಳಿ ಅಧ್ಯಕ್ಷ ರೋಶನ್ ಖಾರ್ವಿ ಶುಭ ಹಾರೈಸಿದರು. ಶಿಶು ಮಂದಿರದ ಸದಸ್ಯರಾದ ಶ್ರೀನಿವಾಸ ಎಂ., ಸವಿತಾ ಯು.ದೇವಾಡಿಗ, ವಿಜಯಶ್ರೀ ವಿ.ಆಚಾರ್ಯ, ವಸಂತಿ ಖಾರ್ವಿ, ಮಾತಾಜಿ ಪ್ರೇಮಾ, ಸಹಾಯಕಿ ರತ್ನ ಉಪಸ್ಥಿತರಿದ್ದರು.
ಶಿಶು ಮಂದಿರದ ಅಧ್ಯಕ್ಷ ಬಿ.ರಾಘವೇಂದ್ರ ಪೈ ಸ್ವಾಗತಿಸಿದರು. ಸಂಚಾಲಕ ಡಾ.ಕಾಶೀನಾಥ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಿ.ಲಕ್ಷ್ಮೀಕಾಂತ ಮಡಿವಾಳ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಅಶ್ವಿತಾ ಜಿ.ಪೈ ವಂದಿಸಿದರು.















