ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಹಿಂದೂ ವಿರೋಧಿ ಶಕ್ತಿಗಳು ಅಪಪ್ರಚಾರ ಈ ಹಿಂದಿನಿಂದ ಮಾಡುತ್ತಾ ಬಂದಿದ್ದು ಈ ವಿಚಾರವಾಗಿ ಧರ್ಮಸ್ಥಳದ ಪರವಾಗಿ ನಿಂತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರಾದ ಬಿಎಲ್ ಸಂತೋಷ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ತೇಜೋವಧೆ ಮಾಡುವ ಹಿಂದೂ ವಿರೋಧಿ ಶಕ್ತಿಗಳ ವಿರುದ್ಧ ಎಂದು ಬೈಂದೂರು ಬಿಜೆಪಿ ಮುಖಂಡ ದೀಪಕ್ ಕುಮಾರ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದಾ ಸಂಘದ ಕಾರ್ಯದಲ್ಲಿ ನಿರತರಾಗಿ, ದೇಶದ ಪರವಾದ ವಿಚಾರಧಾರೆಯ ಧ್ಯೇಯವಿಟ್ಟುಕೊಂಡು ಮನೆ ಮಠವನ್ನು, ಕುಟುಂಬವನ್ನು ತ್ಯಜಿಸಿ ದೇಶಕ್ಕಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪೂರ್ಣಾವಧಿ ಪ್ರಚಾರಕರಾಗಿ ಸೇವೆ ಸಲ್ಲಿಸುತ್ತಿರುವ ಬಿಎಲ್ ಸಂತೋಷ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವವರಿಗೆ ಯಾವುದೇ ನೈತಿಕತೆ ಇಲ್ಲ, ಇದೆಲ್ಲವೂ ಧರ್ಮ ಕಾರ್ಯದಲ್ಲಿ ತೊಡಗಿಕೊಂಡವರ ತೇಜೋವಧೆ ಮಾಡಿ ಮಾನಸಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಎಂದು ಗುಡುಗಿದ್ದಾರೆ.
ಬಾಲ್ಯದಿಂದಲೂ ದೇಶದ ಪರ ಚಿಂತನೆಗಳು, ಹಿಂದುತ್ವದ ವಿಚಾರಧಾರೆಗಳೊಂದಿಗೆ ಬೆಳೆದು ಇಂಜಿನಿಯರಿಂಗ್ ಪದವೀಧರ ಆಗಿದ್ದರು ಸಹ ರಾಷ್ಟ್ರಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಸಿಕೊಂಡ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಕೋಟ್ಯಂತರ ಬಿಜೆಪಿ ಕಾರ್ಯಕರ್ತರ ಸ್ಪೂರ್ತಿದಾಯಕ ನಾಯಕರಾದ, ಅತ್ಯಂತ ಸರಳ ಜೀವನ ಶೈಲಿ ಹೊಂದಿರುವ ಬಿ ಎಲ್ ಸಂತೋಷ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ಸಮಸ್ತ ಬಿಜೆಪಿಯ ಕಾರ್ಯಕರ್ತರಿಗೆ ಮಾಡಿರುವ ಅಪಮಾನ.
ಧರ್ಮಸ್ಥಳ ವಿಚಾರವಾಗಿ ಧ್ವನಿ ಎತ್ತುತ್ತಿರುವವರ ವಿರುದ್ಧ ವಯಕ್ತಿಕ ತೇಜೋವಧೆ ಮಾಡುತ್ತಾ ಅವರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸಕ್ಕೆ ದುಷ್ಟಶಕ್ತಿಗಳು ಮುಂದಾಗಿದ್ದು ಈ ಮೂಲಕ ಅವರಿಗೆ ಬಿಜೆಪಿ ಮುಖಂಡ ದೀಪಕ್ ಕುಮಾರ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
ಪದೇ ಪದೇ ಬಿಜೆಪಿ ನಾಯಕರ ವಿರುದ್ಧ, ಹಿಂದೂ ಮುಖಂಡರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಹಿಂದೂ ಸಮಾಜದ ಮಧ್ಯೆ ವಿಷಬೀಜ ಬಿತ್ತುವ ರಾಷ್ಟ್ರವಿರೋಧಿ ಹಾಗೂ ಧರ್ಮದ್ರೋಹಿಗಳಿಗೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ಹಿಂದೂ ಸಮಾಜ ನೀಡಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















