ಹಕ್ಲಾಡಿಯ ಶ್ರೀ ಕೊಳ್ಕೆಬೈಲು ಸೂರಪ್ಪ ಶೆಟ್ಟಿ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಸಂಪನ್ನ
ಕುಂದಾಪುರ: ಆಂಗ್ಲ ಮಾಧ್ಯಮ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟವನ್ನು ಕನ್ನಡ ಮಾಧ್ಯಮ ಶಾಲೆಗಳಲ್ಲೂ ಅಳವಡಿಸಿಕೊಂಡು ಮುನ್ನಡೆದರೆ ಕನ್ನಡ ಮಾಧ್ಯಮದತ್ತ ಪೋಷಕರು ಒಲವು ತೋರುತ್ತಾರೆ. ಸರಕಾರ ಶಿಕ್ಷಣಕ್ಕೆ ನೂರಾರು ಕೋಟಿ ವ್ಯಯಿಸುತ್ತಿರುವಾಗ ಉತ್ತಮ ಶಿಕ್ಷಣವನ್ನು ನೀಡಿ ಕನ್ನಡ ಮಾಧ್ಯಮ ಶಾಲೆಗಳಿಗೆ ಮರುಜೀವ ನೀಡಬೇಕಿದೆ. ಕನ್ನಡ ಮಾಧ್ಯಮದ ಸೋಲು ಕನ್ನಡದ ಸೋಲು ಎಂದೇ ತಿಳಿಯಬೇಕಾಗುತ್ತದೆ ಎಂದು ಎಂದು ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ ಹೇಳಿದರು.
ಅವರು ಹಕ್ಲಾಡಿಯ ಶ್ರೀ ಕೊಳ್ಕೆಬೈಲು ಸೂರಪ್ಪ ಶೆಟ್ಟಿ ಪ್ರೌಢಶಾಲೆಯ ಸುವರ್ಣ ಮಹೋತ್ಸವದಲ್ಲಿ ಸುವರ್ಣ ಮಹೋತ್ಸವ ವೇದಿಕೆ 3ರಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶಿಕ್ಷಣ ಸಂಸ್ಥೆಗಳು ಐವತ್ತು ವರ್ಷಗಳನ್ನು ಪೂರೈಸುವುದು ಮಹತ್ವದ್ದಾಗಿರುತ್ತದೆ. ಅಂದಿನ ದಿನಗಳಲ್ಲಿಯೇ ಶಿಕ್ಷಣದ ಬಗ್ಗೆ ಕಾಳಜಿಯಿಂದ ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿದ ಹಿನ್ನೆಲೆಯನ್ನು ಯಾರೂ ಮರೆಯಬಾರದು. ಇಂಥಹ ಗ್ರಾಮೀಣ ಭಾಗದ ಶಿಕ್ಷಣ ಸಂಸ್ಥೆಗಳು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂದರು.
ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಬಾಳೆಮನೆ ಸಂತೋಷಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ,ಅಪ್ಪಣ್ಣ ಹೆಗ್ಡೆ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ ಕೃಷ್ಣ ಪ್ರಸಾದ್ ಅಡ್ಯಂತಾಯ, ಕರ್ನಾಟಕ ಸರ್ಕಾರದ ಆರ್ಥಿಕ ಮತ್ತು ಸಾಂಕಿಕ ನಿರ್ದೇಶನಾಲಯದ ನಿರ್ದೇಶಕರಾದ ಬಿ.ಎನ್.ಶೆಟ್ಟಿ, ಜನ್ನಾಡಿಯ ಫೇವರೇಟ್ ಕ್ಯಾಶ್ಯು ಉದ್ಯಮಿ ಶಂಕರ ಹೆಗ್ಡೆ ಹೊಳ್ಮಗೆ, ಹಕ್ಲಾಡಿಯ ಪ್ರಥಮ ದರ್ಜೆ ಗುತ್ತಿಗೆದಾರರಾದ ರಾಜೀವ ಶೆಟ್ಟಿ, ಆಳ್ವಾಸ್ ನುಡಿಸಿರಿ ಕುಂದಾಪುರ ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ ಉಪಸ್ಥಿತರಿದ್ದರು.
ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಡಾ.ಕಿಶೋರ್ ಕುಮಾರ್ ಶೆಟ್ಟಿ, ವಿದ್ಯಾರ್ಥಿ ನಾಯಕಿ ಶಾಂತಿ, ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಸದಸ್ಯ ಸುಭಾಸ್ ಶೆಟ್ಟಿ ಹೊಳ್ಮಗೆ ಸ್ವಾಗತಿಸಿದರು. ಪತ್ರಕರ್ತ ರಾಜೇಶ್ ಕೆ.ಸಿ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮೂಡಬಿದ್ರೆಯ ಆಳ್ವಾಸ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ಸುವರ್ಣ ಸಾಂಸ್ಕೃತಿಕ ನೃತ್ಯ ವೈವಿಧ್ಯ ನಡೆಯಿತು. ತಾಲೂಕಿನ ವಿವಿಧ ಭಾಗಗಳಿಂದ ಸಾವಿರಾರು ಜನ ವಿದ್ಯಾಭಿಮಾನಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅತ್ಯಂತ ಶಿಸ್ತುಬದ್ಧವಾಗಿ, ವ್ಯವಸ್ಥಿತವಾಗಿ ಎರಡು ದಿನ ಸುವರ್ಣ ಮಹೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.