ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಹಾಗೂ ಸಾರ್ವಜನಿಕ ಸೇವೆಯಲ್ಲಿ ಸುದೀರ್ಘಕಾಲ ಗುರುತಿಸಿಕೊಂಡಿರುವ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘವು ಈ ಸಾಲಿನಲ್ಲಿ ರೂ.1140 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿ ರೂ.6.15 ಕೋಟಿ ಲಾಭಗಳಿಸಿದ್ದು, ಸದಸ್ಯರಿಗೆ ಶೇ.15 ಡೆವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.
ಉಪ್ಪುಂದ ದುರ್ಗಾಪರಮೇಶ್ವರೀ ಸಭಾಂಗಣದಲ್ಲಿ ಭಾನುವಾರ ನಡೆದ 2024-25ನೇ ಸಾಲಿನ 48ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಸಂಘವು ವೈವಿಧ್ಯಮಯ ಯೋಜನೆಗಳನ್ನು ಕಾರ್ಯಗತಗೊಳಿಸಿದೆ. ರೈತಾಪಿ ವರ್ಗದ ಹಾಗೂ ಗ್ರಾಹಕರ ಸೇವೆಯಲ್ಲಿ ಜನ ಮನ್ನಣೆಗಳಿಸಿಗೊಂಡು ಸಹಕಾರಿ ರಂಗದಲ್ಲಿ ವಿಶಿಷ್ಟ ವಿನೂತನ ಸಾಧನೆಯಿಂದ ಜನಾನುರಾಗಿಯಾಗಿದೆ. ಕಳೆದ 23 ವರ್ಷಗಳಿಂದ ಸತತವಾಗಿ ’ಎ’ ವರ್ಗದ ಆಡಿಟ್ ವರ್ಗೀಕರಣ ಹೊಂದಿದ್ದು, ಸವಾಂಗೀಣ ನಿರ್ವಹಣೆಗೆ ಈ ವರ್ಷ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಕೊಡಮಾಡಿದ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ ಲಭಿಸಿದೆ. ಅಲ್ಲದೇ ಸಂಘವು ಪ್ರಾಯೋಜಿಸಿರುವ ರೈತಸಿರಿ ರೈತಸೇವಾ ಒಕ್ಕೂಟಕ್ಕೆ ಜಿಲ್ಲಾಮಟ್ಟದ ಪ್ರಶಸ್ತಿ ಸಂದಿದೆ ಎಂದರು.

ಸಂಘವು ಗಳಿಸಿದ ಲಾಭಾಂಶದಲ್ಲಿ ಕಾರ್ಯವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸರ್ಕಾರಿ ಶಾಲೆಗಳ ಗೌರವ ಶಿಕ್ಷಕರಿಗೆ ಗೌರವಧನ, ಬೇಡಿಕೆಯಂತೆ ಮೂಲಸೌಕರ್ಯಗಳಿಗೆ ಸಹಾಯಧನ ನೀಡುತ್ತಿದ್ದೇವೆ. ಸಹಕಾರ ಸಂಸ್ಥೆಯಲ್ಲಿ ಸಂಘದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದವರನ್ನು ಸನ್ಮಾನಿಸಲಾಗುತ್ತಿದೆ. ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕ್ರೀಡೆ, ಸಾಂಸ್ಕೃತಿಕ ಹಾಗೂ ಧಾರ್ಮಿಕ ನೆಲೆಯಲ್ಲಿ ಜರಗುವ ಕಾರ್ಯಕ್ರಮಗಳಿಗೆ ನಿರಂತರ ಸಹಾಯವನ್ನು ನೀಡುತ್ತಾ ಬಂದಿರುತ್ತೇವೆ ಎಂದರು.

ಸಂಘದ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ಮಂಜು ದೇವಾಡಿಗ, ನಿರ್ದೇಶಕರಾದ ಈಶ್ವರ ಹಕ್ಲತೋಡು, ಮೋಹನ ಪೂಜಾರಿ, ಬಿ.ಎಸ್. ಸುರೇಶ ಶೆಟ್ಟಿ, ಗುರುರಾಜ್ ಹೆಬ್ಬಾರ್, ಭರತ್ ದೇವಾಡಿಗ, ಹೂವ ನಾಯ್ಕ್, ಪ್ರಕಾಶ ಪೂಜಾರಿ, ರಾಜೇಶ ದೇವಾಡಿಗ, ಉದಯಕುಮಾರ್ ಶೆಟ್ಟಿ, ದಿನಿತಾ ಶೆಟ್ಟಿ, ಲೀಲಾ ಪೂಜಾರಿ, ರಂಜಿತ್‌ಕುಮಾರ್ ಶೆಟ್ಟಿ ಇದ್ದರು. ಸಂಘದ ಸಿಇಒ ವಿಷ್ಣು ಆರ್. ಪೈ ಕಾರ್ಯಕ್ರಮ ನಿರ್ವಹಿಸಿದರು. ಹಿರಿಯ ವ್ಯವಸ್ಥಾಪಕ ಚಂದಯ್ಯ ಶೆಟ್ಟಿ ವಂದಿಸಿದರು.










