ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಂಡ್ಸೆ ಹೋಬಳಿ ಹಾಗೂ ಬೈಂದೂರು ಹೋಬಳಿಯ ಅರ್ಹ ಎಲ್ಲಾ 94ಸಿ ಅರ್ಜಿಗಳನ್ನು ಕಂದಾಯ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ವಿಲೇವಾರಿ ಮಾಡಲಾಗಿದೆ.
ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ವಂಡ್ಸೆ ಹೋಬಳಿಯ 94ಸಿ ಕಡತಗಳ ಬಗ್ಗೆ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಮಾತನಾಡಿ, ಕಳೆದ ಎರಡು ವರ್ಷ ಗಳಲ್ಲಿ ಸುಮಾರು 800 ಹಕ್ಕು ಪತ್ರಗಳನ್ನು ವಿತರಿಸಲಾಗಿದೆ ಎಂದರು.
ಭಾಗಶಃ ಡೀಮ್ಡ್ ವ್ಯಾಪ್ತಿಯಲ್ಲಿ ವಂಡ್ಸೆ ಹೋಬಳಿಯ 460 & ಬೈಂದೂರು ಹೋಬಳಿಯ 117 ಅರ್ಜಿಗಳು ಹಾಗೂ ಕುಮ್ಕಿ ವ್ಯಾಪ್ತಿಯಲ್ಲಿ ವಂಡ್ಸೆ ಹೋಬಳಿಯಲ್ಲಿ 936 ಅರ್ಜಿಗಳು ಹಾಗೂ ಬೈಂದೂರು ಹೋಬಳಿಯಲ್ಲಿ 248 ಅರ್ಜಿಗಳು ಇರುವುದಾಗಿದೆ. ಭಾಗಶಃ ಡೀಮ್ಡ್ ಫಾರೆಸ್ಟ್ ಅರ್ಜಿಗಳನ್ನು ಅರಣ್ಯ ಇಲಾಖೆಯ ಜಂಟಿ ಸರ್ವೇ ಮೂಲಕ ವಿಲೇವಾರಿ ಮಾಡುವ ಪ್ರಕ್ರಿಯೆ ಯನ್ನು ತ್ವರಿತ ಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಉಳಿದಂತೆ ಕುಮ್ಕಿ ವ್ಯಾಪ್ತಿಯಲ್ಲಿನ 94 ಸಿ ಅರ್ಜಿಗಳ ವಿಲೇವಾರಿ ಗೆ ಕಾನೂನು ತೊಡಕು ಇರುವುದರಿಂದ ತಕ್ಷಣದ ಕ್ರಮ ಸಾಧ್ಯವಿಲ್ಲ. ಆದರೂ ಕುಮ್ಕಿ ಭೂಮಿಯಲ್ಲಿ ಕನಿಷ್ಠ ಜಾಗದಲ್ಲಿ ಹಲವಾರು ವರ್ಷಗಳಿಂದ ಮನೆ ಕಟ್ಟಿ ಕೊಂಡ ಬಡವರಿಗೆ ವಿಶೇಷ ನೆಲೆಯಲ್ಲಿ ಮನೆ ಅಡಿ ಜಾಗಕ್ಕೆ ಸಂಬಂಧಿಸಿದಂತೆ ಹಕ್ಕು ಪತ್ರ ಒದಗಿಸಿ ಕೊಡಲು ಕಂದಾಯ ಸಚಿವರಿಗೆ ಈಗಾಗಲೇ ಅಧಿವೇಶನ ದಲ್ಲಿ ಮನವಿ ಮಾಡಲಾಗಿದ್ದು, ಮುಂದೆಯೂ ಸಚಿವರಿಗೆ ಒತ್ತಡ ಹಾಕಿ ಅಂತಹ ಅರ್ಜಿಗಳನ್ನು ಪುರಸ್ಕರಿಸಲು ಹಾಗೂ ಅರ್ಹರಿಗೆ ಹಕ್ಕು ಪತ್ರ ನೀಡಲು ಪ್ರಯತ್ನಿಸಲಾಗುವುದು ಹಾಗೂ ಮುಂದಿನ ದಿನಗಳಲ್ಲಿ ಹೋರಾಟದ ಮೂಲಕ ವಾದರೂ ಬಡವರಿಗೆ ಹಕ್ಕು ಪತ್ರ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.
ಕುಂದಾಪುರ ತಹಸೀಲ್ದಾರ್ ಪ್ರದೀಪ್ ಕುರುಡೇಕರ್, ಉಪ ತಹಶೀಲ್ದಾರರಾದ ಪ್ರಕಾಶ್, ಕಂದಾಯ ನಿರೀಕ್ಷರಾದ ರಾಘವೇಂದ್ರ ಹಾಗೂ ವಂಡ್ಸೆ ಹೋಬಳಿಯ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.















