ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪ್ರ ಕನ್ನಡ ಭಾಷೆ ಅದ್ಬುತವಾದ ಭಾಷೆ. ನಮ್ಮ ಈ ಪ್ರೀತಿಯ ಭಾಷೆಗೆ ಕರುಳಿನ ಸಂಬಂಧ ಇದೆ. ಈ ಭಾಷೆಯೊಂದಿಗೆ ನಮ್ಮ ಸಂಸ್ಕೃತಿ ಉಳಿದುಕೊಂಡಿದೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಹೇಳಿದರು.
ಅವರು ಕುಂದ ಕನ್ನಡ ಭಾಷಾಭಿವೃದ್ಧಿ ವೇದಿಕೆ ಭಂಡಾರ್‌ಕಾರ್ಸ್ ಕಾಲೇಜಿನ ಸಹಯೋಗದಲ್ಲಿ ಏರ್ಪಡಿಸಿದ ಕುಂದ ಕನ್ನಡ ಶಬ್ದಗಳನ್ನು ಬರೆಯುವ, ಗಾದೆಗಳನ್ನು ಹೇಳುವ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡುವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ವಿದ್ಯಾರ್ಥಿಗಳು ಕುಂದಾಪ್ರ ಕನ್ನಡ ಭಾಷೆಯ ವೈಶಿಷ್ಟ್ಯ ಅರಿತು ಅದನ್ನು ಬಳಸಬೇಕು. ಹೆಚ್ಚು ಬಳಸಿದಷ್ಟು ಅದು ಉಳಿದುಕೊಳ್ಳುತ್ತದೆ, ಬೆಳೆಯುತ್ತದೆ. ಉತ್ತಮವಾಗಿ ಗಾದೆಯನ್ನು ಹೇಳಿದ್ದೀರಿ. ಕುಂದ ಕನ್ನಡ ಶಬ್ದಗಳನ್ನು ಬರೆದಿದ್ದೀರಿ. ನಿಮ್ಮ ಆಸಕ್ತಿ ಇನ್ನಷ್ಟು ವ್ಯಕ್ತಿತ್ವ ಬೆಳವಣಿಗೆಗೆ ಸಹಕಾರಿಯಾಗಲಿ ಎಂದರು.
ಫ್ರೆಂಡ್ಸ್ ಸ್ವಾವಲಂಬನ ಸಂಘಟನೆಯ ಸಂಚಾಲಕ ವೆಂಕಟೇಶ ಪೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾಷೆಯೊಂದಿಗೆ ಪರಿಸರ ಉಳಿಸುವ ಕಾರ್ಯ ನಾವು ಮಾಡಬೇಕು. ಪ್ಲಾಸ್ಟಿಕ್ ಬದಲು ಆದಷ್ಟು ಬಟ್ಟೆ ಚೀಲ ಬಳಸಬೇಕು ಎಂದರು.
ಸಾಮಾಜಿಕ ಧುರೀಣ, ಸೂಪರ್ ಗ್ರೇಡ್ ಇಲೆಕ್ಟ್ರಿಕಲ್ ಕಂಟ್ರಾಕ್ಟರ್, ಕೆ. ಆರ್. ನಾಯ್ಕ್ ಅವರು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ’ಕುಂದಾಪ್ರ ಕನ್ನಡ ಭಾಷೆ ನಮ್ಮ ದೇಶದಲ್ಲೇ ವಿಶಿಷ್ಟವಾದುದು. ಕುಂದಾಪ್ರ ಕನ್ನಡ ಭಾಷೆಯ ಜನ ದೇಶ ವಿದೇಶಗಳಲ್ಲಿದ್ದು, ನಮ್ಮ ಭಾಷೆಯನ್ನು ಕೇಳಿದ ಕೂಡಲೇ ಆತ್ಮೀಯರಾಗಿ ಬಿಡುತ್ತಾರೆ. ವಿಷಯವನ್ನು ಚುಟುಕಾಗಿ ಹೇಳುವ ಈ ಭಾಷೆ ಈಗ ಎಲ್ಲಾ ರಂಗಗಳಲ್ಲೂ ಮೆರೆಯುತ್ತಿದೆ. ವಿದ್ಯಾರ್ಥಿಗಳೂ ಉತ್ಸಾಹದಿಂದ ಸ್ಪರ್ಧೆಗಳಲ್ಲು ಪಾಲ್ಗೊಳ್ಳುತ್ತಿರುವುದು ಖುಷಿಯಾಗಿದೆ ಎಂದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಚ್. ಸೋಮಶೇಖರ ಶೆಟ್ಟಿ ಶುಭ ಹಾರೈಸಿದರು. ರೇಡಿಯೋ ಕುಂದಾಪ್ರ 89.6 ಎಫ್. ಎಂ.ನ ನಿರ್ವಾಹಕರಾದ ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮ ನಿರ್ವಹಿಸಿದರು. ಕುಂದ ಕನ್ನಡ ಭಾಷಾಭಿವೃದ್ಧಿ ವೇದಿಕೆಯ ಸಂಚಾಲಕ ಯು. ಎಸ್. ಶೆಣೈ ಸ್ವಾಗತಿಸಿದರು. ಭಂಡಾರ್‌ಕಾರ್ಸ್ ಕಾಲೇಜಿನ ವಿದ್ಯಾರ್ಥಿಗಳಾದ ಸಿಂಚನಾ, ಮಿಥುನ್ ದೇವಾಡಿಗ, ಸಾತ್ಯಕಿ, ಸುದೀಕ್ಷಾ, ಶೋಭಿತಾ ಸಹಕರಿಸಿದರು. ಸಂದೀಪ್ ಶೆಟ್ಟಿ ವಂದಿಸಿದರು.















