ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಕೋಟೇಶ್ವರ ಇಲ್ಲಿನ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮವು ಇತ್ತೀಚೆಗೆ ಜರಗಿತು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಕೃಷ್ಣ ಕಾಂಚನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, “ವಿದ್ಯಾರ್ಥಿಗಳು ಹಾಗೂ ಅವರ ಮುಂದಿನ ವೃತ್ತಿ ಬದುಕಿನಲ್ಲಿ ಹಲವಾರು ಸವಾಲುಗಳು ಎದುರಾಗುತ್ತವೆ ಎಂಬುದನ್ನು ಅರಿತುಕೊಂಡು ಆ ಸವಾಲುಗಳನ್ನು ಎದುರಿಸಲು ಬೇಕಾದ ಮಾನಸಿಕ ಧೈರ್ಯ ಹಾಗೂ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಸ್ನಾತಕೋತರ ಪದವಿಯ ಹಂತದಲ್ಲಿ ಜ್ಞಾನ ಸಂಪಾದನೆಯ ಎಲ್ಲಾ ಮಾರ್ಗಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ವಿದ್ಯಾಭ್ಯಾಸ ಮುಗಿಸಿಕೊಂಡು ಹೊರ ಬಂದಾಗ ಜೀವನ ಯಶಸ್ವಿಯಾಗುತ್ತದೆ” ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಅಜ್ಜರಕಾಡು ಡಾ. ಜಿ. ಶಂಕರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಧ್ಯಾಪಕ ರವಿಪ್ರಸಾದ್ ಅವರು ಮಾತನಾಡಿ, ಉನ್ನತ ಶಿಕ್ಷಣದ ಅವಕಾಶ ಕೆಲವರಿಗೆ ಮಾತ್ರ ಸಿಗುತ್ತದೆ ಅಂತಹ ಅವಕಾಶವನ್ನು ಪಡೆದಿರುವ ನೀವು ಹೆಚ್ಚು ಕ್ರಿಯಾಶೀಲರಾಗಿ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಉನ್ನತ ಶಿಕ್ಷಣದಲ್ಲಿ ಜ್ಞಾನ ಸಂಪಾದನೆಯ ಜೊತೆಗೆ ಸೂಕ್ತ ಕೌಶಲಗಳನ್ನು ವೃದ್ಧಿಸಿಕೊಂಡು ಸ್ಪರ್ಧಾತ್ಮಕ ಪ್ರಪಂಚದಲ್ಲ ಉದ್ಯೋಗವನ್ನು ಪಡೆಯಲು ಪ್ರಯತ್ನಿಸಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಿಂದ ಆಗುವ ಪ್ರಯೋಜನಗಳು, ಅವಕಾಶಗಳು ಹಾಗೂ ಅವಕಾಶಗಳನ್ನು ಬಳಸಿಕೊಳ್ಳಲು ಮಾಡಿಕೊಳ್ಳಬೇಕಾದ ಪೂರ್ವ ತಯಾರಿಯ ಬಗ್ಗೆ ಮಾರ್ಗದರ್ಶನ ನೀಡಿದರು.
ಕಾಲೇಜಿನ ಐಕ್ಯೂಎಸಿ ಸಂಚಾಲಕ ನಾಗರಾಜ ಎಂ., ಕಾಲೇಜಿನ ವಿದ್ಯಾರ್ಥಿ ಸ್ತ್ರೀಮಪಾಲನಾಧಿಕಾರಿ ನಾಗರಾಜ ವೈದ್ಯ, ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ಶೇಖರ ಬಿ. ಹಾಗೂ ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಕಾರ್ತಿಕ್ ಪೈ ಉಪಸ್ಥಿತರಿದ್ದರು.
ಸ್ನಾತಕೋತ್ತರ ವಿಭಾಗದ ಸಂಚಾಲಕ ಡಾ. ಉದಯ ಶೆಟ್ಟಿ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ರಶ್ಮಿ ಕಾರ್ಯಕ್ರಮ ನಿರೂಪಿಸಿ, ಗೌತಮಿ ಸ್ವಾಗತಿಸಿ, ಪ್ರತಿಮಾ ವಂದಿಸಿದರು.
ಅಭಿ ವಿನ್ಯಾಸ ಕಾರ್ಯಕ್ರಮದ ನಂತರ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಹೊಸಬರ ದಿನವನ್ನು ಆಚರಿಸಲಾಯಿತು.















