ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಾರಿಯಾದ ಬಳಿಕ ದೇಶದಲ್ಲಿ, ರಾಜ್ಯದಲ್ಲಿ ಒಂದು ದೊಡ್ಡ ಕ್ರಾಂತಿಯಾಗಿದೆ. ಮಹಿಳೆಯರು ಸ್ವಾವಲಂಬಿ ಜೀವನ ನಡೆಸುವುದರ ಜೊತೆಗೆ ಸಮಾಜದ ಮುಖ್ಯ ವಾಹಿನಿಗೆ ಬರಲು ಸಹಕಾರಿಯಾಗಿದೆ ಎಂದು ಯೋಜನೆಯ ಉತ್ತರ ಕನ್ನಡ ಜಿಲ್ಲೆಯ ನಿರ್ದೇಶಕ ಮಹೇಶ ಎಂ.ಡಿ. ಹೇಳಿದರು.
ಅವರು ನಾವುಂದದ ಸ್ಕಂದ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಇದರ ಬೈಂದೂರು ತಾಲೂಕು ಜನಜಾಗೃತಿ ವೇದಿಕೆ ಸದಸ್ಯರ ಸಭೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಜನಜಾಗೃತಿ ವೇದಿಕೆ ಮೂಲಕ ಸಹಸ್ರಾರು ಜನರನ್ನು ಮದ್ಯಪಾನದಂತಹ ದುಶ್ಚಟಗಳಿಂದ ದೂರ ಮಾಡಿ ನೆಮ್ಮದಿಯ ಜೀವನ ಬದುಕಲು ಅವಕಾಶ ಮಾಡಿಕೊಟ್ಟಿದೆ. ಜನಜಾಗೃತಿ ವೇದಿಕೆಯ ಕಾರ್ಯಕ್ರಮಗಳು ಜನರಿಗೆ ಇನ್ನಷ್ಟು ಹತ್ತಿರವಾಗಲು, ಜನರು ದುಶ್ಚಟಗಳಿಗೆ ಬಲಿಯಾಗದಂತೆ ನೋಡಿಕೊಳ್ಳುವಲ್ಲಿ ಜನಜಾಗೃತಿ ವೇದಿಕೆ ಸದಸ್ಯರ ಪಾತ್ರ ಮಹತ್ತರವಾಗಿದೆ ಎಂದರು.
ಬೈಂದೂರು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸುಧಾಕರ ಆಚಾರ್ಯ ತ್ರಾಸಿ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಸತೀಶ ಎಂ. ನಾಯಕ್, ಮಹಾಬಲ ಪೂಜಾರಿ, ರಾಮ ಮೇಸ್ತ, ಸ್ವಸಹಾಯ ಸಂಘಗಳ ಕೇಂದ್ರ ಸಮಿತಿ ಅಧ್ಯಕ್ಷ ವಾಸು ಮೇಸ್ತ, ಯೋಜನಾಧಿಕಾರಿ ಸಂಜಯ ನಾಯ್ಕ್, ಕೋಶಾಧಿಕಾರಿ ಶರತ್ ಕುಮಾರ್ ಶೆಟ್ಟಿ, ವಿವಿಧ ವಲಯಗಳ ಜನಜಾಗೃತಿ ವೇದಿಕೆ ಸದಸ್ಯರು, ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.
ವಲಯ ಮೇಲ್ವಿಚಾರಕರು ವಲಯಗಳ ವರದಿ ವಾಚಿಸಿದರು. ಕಿರಿಮಂಜೇಶ್ವರ ವಲಯ ಮೇಲ್ವಿಚಾರಕ ಭರತ್ ಸ್ವಾಗತಿಸಿ, ವಂದಿಸಿದರು.















