ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನ – ಶ್ರೀ ರಾಮಕ್ಷತ್ರಿಯ ಯುವಕ ಸಮಾಜದಿಂದ 39ನೇ ವರ್ಷದ ಶ್ರೀ ಶಾರದೋತ್ಸವ ಸಮಾರಂಭವು ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 02ರ ತನಕ ಅದ್ದೂರಿಯಾಗಿ ಜರುಗಲಿದೆ.
ಸೆ.29ರಂದು ಬೆಳಿಗ್ಗೆ ಶ್ರೀ ಶಾರದಾಂಬೆ ವಿಗ್ರಹವನ್ನು ವಾದ್ಯಘೋಷದೊಂದಿಗೆ ತಂದು ಪ್ರತಿಷ್ಠಾಪಿಸಿದ ಬಳಿಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಭಜನಾ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಅ.01ರ ಬುಧವಾರ ನವಚಂಡಿಕಾ ಯಾಗ ಹಾಗೂ ಅದೇ ದಿನ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.
ಶಾರದೋತ್ಸವದ ಅಂಗವಾಗಿ ವಿವಿಧ ಸ್ಪರ್ಧೆಗಳ ಜರುಗಲಿದ್ದು, ಸೆ.29ರ ಸೋಮವಾರ ಮಧ್ಯಾಹ್ನ 2.30ರಿಂದ ಭಕ್ತಿಗೀತೆ, ರಂಗೋಲಿ ಸ್ಪರ್ಧೆ, ಹೂಮಾಲೆ ಕಟ್ಟುವ ಸ್ಪರ್ಧೆ, ಭಗವದ್ಗೀತಾ ಪಠಣ ಸ್ಪರ್ಧೆ ನಡೆಯಲಿದೆ. ಅಂದು ಸಂಜೆ 6.00ಕ್ಕೆ ಕುಣಿತ ಭಜನಾ ಸ್ಪರ್ಧೆ ನಡೆಯಲಿದೆ. ಅ.1ರಂದು ರಾಮಕ್ಷತ್ರಿಯ ಸಾಂಸ್ಕೃತಿಕ ವೈಭವ ಸ್ಪರ್ಧೆ ಜರುಗಲಿದೆ. ಸೆ.30ರಂದು ಕೋಟೆಬಾಗಿಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಬೈಂದೂರು ಸರಕಾರಿ ಮಾದರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಹಾಗೂ ನಾಗೂರು ನೂಪುರ ಕಲಾತಂಡ ಇವರಿಂದ ನಾಟ್ಯ ನಿನಾದ ಪ್ರದರ್ಶನಗೊಳ್ಳಲಿದೆ. ಅ.1ರಂದು ಬೈಂದೂರು ವಲಯ ವ್ಯಾಪ್ತಿಯ ಆಹ್ವಾನಿತ ರಾಮಕ್ಷತ್ರಿಯ ತಂಡಗಳಿಂದ ರಾಮಕ್ಷತ್ರಿಯ ಸಾಂಸ್ಕೃತಿಕ ವೈಭವ ಸ್ಪರ್ಧೆ ಜರುಗಲಿದೆ.
ಸೆ.30 ಹಾಗೂ ಅ.1ರ ಸಂಜೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ವಿವಿಧ ಅತಿಥಿ ಗಣ್ಯರು ಭಾಗವಹಿಸಲಿದ್ದು, ಸಾಧಕರಿಗೆ ಸನ್ಮಾನ, ಕ್ರೀಡಾ ಸ್ಪರ್ಧೆಯನ್ನು ಒಳಗೊಂಡಂತೆ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಮೊದಲಾದ ಕಾರ್ಯಕ್ರಮಗಳು ಜರುಗಲಿದೆ.
ಈ ಎಲ್ಲಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್ರೀ ರಾಮಕ್ಷತ್ರಿಯ ಯುವಕ ಸಮಾಜದ ಗೌರವ ಅಧ್ಯಕ್ಷ ರವೀಂದ್ರ ಸೋಡಿತಾರ್, ಅಧ್ಯಕ್ಷ ರಾಜಶೇಖರ ರೊಕ್ಕನ್, ಪ್ರಧಾನ ಕಾರ್ಯದರ್ಶಿ ಅಶೋಕ ಜಿ., ಹಾಗೂ ಕಾರ್ಯದರ್ಶಿ ಕೌಶಿಕ್ ಜಿ.ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















