ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪರಿಸರ ಉಳಿಸಿ ಎಂಬ ಸಂದೇಶದೊಂದಿಗೆ ಉಡುಪಿಯಿಂದ ಲಡಾಖ್‌ವರೆಗೆ 3,300 ಕಿಮೀ ಯಾತ್ರೆಯನ್ನು ಸತತ 11 ತಿಂಗಳು ಸೈಕಲ್‌ನಲ್ಲಿ ಪ್ರಯಾಣಿಸುವ ಮೂಲಕ ವಿಶಿಷ್ಟ ಸಾಧನೆ ಮಾಡಿದ ತಾಲೂಕಿನ ಕಮಲಶಿಲೆ ಹಳ್ಳೀಹೊಳೆ ಸಮೀಪದ ಪಾರ್ವತಿ ಮತ್ತು ಶೇಷು ಬೋವಿ ದಂಪತಿಯ ಪುತ್ರ ದಿನೇಶ್ ಬೋವಿ ಇದೀಗ ಹುಟ್ಟೂರಿಗೆ ಮರಳಿದ್ದಾರೆ.
ಅಪ್ರತಿಮ ಸಾಧನೆ ತೋರಿ ಊರಿಗೆ ಮರಳಿದ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುವ ದಿನೇಶ್ ಅವರಿಗೆ ಶನಿವಾರ ಕಾಲೇಜಿನ ವತಿಯಿಂದ ಆತ್ಮೀಯವಾಗಿ ಅಭಿನಂದಿಸಲಾಯಿತು.
ಈ ವೇಳೆ ಮಲ್ಪೆ ಪೊಲೀಸ್ ಠಾಣೆಯ ಎಸ್ಸೈ ಅನಿಲ್ ಕುಮಾರ್, ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಜಯರಾಮ ಶೆಟ್ಟಿಗಾರ್, ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಆಲನ್ ಲೂವಿಸ್, ಶೇಖರ ಗುಜ್ಜರಬೆಟ್ಟು, ಶಾಲೆಟ್ ಮಥಾಯಸ್, ಶಿಕ್ಷಕ ರಕ್ಷಕ ಸಂಘದ ಗಣೇಶ್ ಮೇಸ್ತ ಹಾಗೂ ಇತರರು ಉಪಸ್ಥಿತರಿದ್ದರು.

ಅವರು 2024ರ ಅ.15ರಂದು ಉಡುಪಿಯಿಂದ ಸೈಕಲ್ ಮೂಲಕ ಲಡಾಖ್ ಗೆ ಪ್ರಯಾಣ ಬೆಳೆಸಿದ್ದು 2025ರ ಸೆ.15ರಂದು ಲಡಾಖ್ ತಲುಪುವುದರ ಜೊತೆ ಸತತ 330 ದಿನಗಳ ಸೈಕಲ್ ಯಾತ್ರೆಯನ್ನು ಸಂಪೂರ್ಣಗೊಳಿಸಿ ದ್ದಾರೆ. ಸೈಕಲ್ ಮೂಲಕ ಅವರು 8 ರಾಜ್ಯಗಳಿಗೆ ಭೇಟಿ ನೀಡಿದ್ದಾರೆ.
ಕರ್ನಾಟಕದಿಂದ ಆರಂಭಗೊಂಡು, ಗೋವಾ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಪಂಜಾಬ್, ಹರಿಯಾಣ ಮೂಲಕವಾಗಿ ಜಮು ಕಾಶ್ಮೀರ ತಲುಪಿದ್ದಾರೆ. 11 ತಿಂಗಳಿಗಿಂತ ಬೇಗ ತಲುಪ ಬಹುದಾಗಿದ್ದರೂ, ಕಾಶ್ಮೀರದ ಥಾಂಗ್ ಗ್ರಾಮದ ರಸ್ತೆ ವರ್ಷದಲ್ಲಿ 6 ತಿಂಗಳು ಮಾತ್ರ ತೆರೆದಿದ್ದು, ಅದಕ್ಕಾಗಿ ತಿಂಗಳು ಮುಂಬೈಯಲ್ಲಿ ವಿಶ್ರಾಂತಿ ಮಾಡಿದ್ದರೆ, 3 ತಿಂಗಳು ಗುಜರಾತಿನಲ್ಲಿ ತಂಗಿದ್ದರು. ಲಡಾಖ್‌ನ ಛಾಂಗ್ ಭಾರತದ ಗಡಿಗ್ರಾಮ ವಾಗಿದ್ದು ಅದರ ಆಚೆ ಪಾಕಿಸ್ಥಾನ ಭೂಪ್ರದೇಶ ಕಾಣಿಸುತ್ತದೆ.
11 ತಿಂಗಳ ಸೈಕಲ್ ಪ್ರಯಾಣದಲ್ಲಿ ಆಹಾರಕ್ಕೆ ಹೆಚ್ಚಿನ ಖರ್ಚಾಗಿದ್ದು ಪ್ರಯಾಣದ ಸಂಪೂರ್ಣ ವೆಚ್ಚ ಸುಮಾರು 1.5 ಲಕ್ಷ ರೂ. ಆಗಿದ್ದು, ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ .ವಿನ್ಸೆಂಟ್ ಆಳ್ವಾ ದಾನಿಗಳ ಹಾಗೂ ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಭರಿಸಿದ್ದಾರೆ. ಸ್ವತಃ ಸೈಕಲಿಸ್ಟ್ ಆಗಿರುವ ವಿನ್ಸೆಂಟ್ ಆಳ್ವಾ ಸೈಕಲ್ ಸಹ ಕೊಡುಗೆಯಾಗಿ ನೀಡಿ, ತನ್ನ ವಿದ್ಯಾರ್ಥಿಗೆ ಪ್ರೋತ್ಸಾಹಿಸಿದ್ದಾರೆ.
ಜೊತೆಯಾದ ನಾಯಿ ಚಾರ್ಲಿ:
ದಿನೇಶ್ ಸೈಕಲ್ ಪ್ರಯಾಣದ ವೇಳೆ ಕರ್ನಾಟಕ – ಗೋವಾ ಗಡಿಭಾಗದಲ್ಲಿ ತಂಗಿದ್ದಾಗ ಬೀದಿ ಬದಿಯಲ್ಲಿದ್ದ ಹೆಣ್ಣು ನಾಯಿ ಮರಿಯೊಂದು ಇವರಿಗೆ ಸಿಕ್ಕಿದ್ದು, ಅದಕ್ಕೆ ಆಹಾರ ನೀಡಿದ್ದು ಬಳಿಕ ಅದನ್ನು ಜೊತೆಯಲ್ಲಿ ಕರೆದುಕೊಂಡು ಲಡಾಕ್‌ಗೆ ಸೈಕಲಿನಲ್ಲಿಯೇ ಪ್ರಯಾಣ ಬೆಳೆಸಿದ್ದಾರೆ. ನೇಶ್ ಜೊತೆ ನಾಯಿ ಕೂಡ 326 ದಿನಗಳ ಕಾಲ ಸಂಚಾರ ಮುಗಿಸಿದೆ. ಅಲ್ಲಿಂದ ಆ ನಾಯಿಯೊಂದಿಗೆ ಅವರು ಊರಿಗೆ ವಾಪಾಸಾಗಿದ್ದು ಮನೆಗೆ ಕೊಂಡೊಯ್ದಿದ್ದಾರೆ.
ರಸ್ತೆಯಲ್ಲಿ ಸಿಕ್ಕವರಿಗೆ ಪರಿಸರ ಉಳಿಸಿ ಅನ್ನುವ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಈ ಯಾತ್ರೆ ಕೈಗೊಂಡಿದ್ದೆ. ಈ ಹಿಂದೆ ಉಡುಪಿಯಿಂದ ಧರ್ಮಸ್ಥಳ ಕಾಲ್ನಡಿಗೆ ಮಾಡಿದ್ದೆ. ಅದಾದ ಬಳಿಕ ಉಡುಪಿಯಿಂದ ಕನ್ಯಾಕುಮಾರಿಗೆ 1.500 ಕಿ.ಮೀ. ದೂರವನ್ನು (21 ದಿನಗಳ ಕಾಲ) ಸೈಕಲ್‌ನಲ್ಲಿ ಕ್ರಮಿಸಿದ್ದೆ. ಮನೆಯವರು, ಕಾಲೇಜಿನವರ ಸಹಕಾರದಿಂದ ಇದು ಸಾಧ್ಯವಾಯಿತು – ದಿನೇಶ್ ಬೋವಿ, ಸೈಕಲ್ ಸಾಧಕ















