ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಸೋಮವಾರಂದು ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಸಂದೇಶಗಳ ಪರಿಚಯಕ್ಕಾಗಿ ’ಗೀತಾ ಸಂದೇಶ ಸಾರ’ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸುಬ್ರಾಯ ನಂದೋಡಿ, ಕಾಸರಗೋಡು ಪ್ರಧಾನ ಗುರುಗಳು ಗೀತಾ ಜ್ಞಾನ ಯಜ್ಞ ಸಮಿತಿಯವರು ಮಕ್ಕಳಿಗೆ ಭಗವದ್ಗೀತೆಯ ಬಗ್ಗೆ ತಿಳಿಸುತ್ತಾ, ನಾವು 84 ಲಕ್ಷ ಕೋಟಿ ಜನ್ಮಗಳನ್ನು ದಾಟಿ ಮನುಷ್ಯ ಜನ್ಮ ಪಡೆದಿದ್ದೇವೆ. ದೇಹವನ್ನು ಶುದ್ಧೀಕರಿಸುವಂತೆ ಸದಾ ಮನಸ್ಸನ್ನು ಶುದ್ಧ ಮಾಡಿಕೊಳ್ಳುತ್ತಿರಬೇಕು. ಇಂದು ನೀವು ಈ ಶಾಲೆಯಲ್ಲಿ ನಿಮ್ಮ ದೈನಂದಿನ ದಿನಚರಿಯನ್ನು ಹೇಗೆ ಪಾಲಿಸುತ್ತಿರೊ ಅದೇ ದಿನಚರಿಯನ್ನು ನಿಮ್ಮ ಮುಂದಿನ ಜೀವನದಲ್ಲೂ ಮುಂದುವರಿಸಿಕೊಳ್ಳಬೇಕು.
ನಾವು ನಮ್ಮ ಬಗ್ಗೆಯಷ್ಟೇ ಮಾತಾಡಬೇಕು. ನಮ್ಮ ಉದ್ಧಾರ ನಮ್ಮ ಪ್ರಯತ್ನದಿಂದಲೇ ಸಾಧ್ಯ. ಪ್ರಾಮಾಣಿಕತೆಯನ್ನು ಬೆಳೆಸಿಕೊಳ್ಳಬೇಕು. ಸುಖ-ದುಃಖವನ್ನು ಸಮಾನವಾಗಿ ಕಾಣಬೇಕು. ಹಿರಿಯನ್ನು ಗೌರವಿಸಿ, ಕಲಿಯುವ ತವಕದಿಂದ ಪ್ರಶ್ನಿಸಬೇಕು. ಆಗಷ್ಟೇ ವಿದ್ಯಾಭ್ಯಾಸ ಸುಲಲಿತವಾಗಿ ಸಾಗಬಲ್ಲದು ಎನ್ನುತ್ತಾ ಭಗವದ್ಗೀತೆಯ ಅಧ್ಯಯನವನ್ನು ನಿರಂತರ ನಡೆಸಿರೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಮತ್ತು ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ ಮಾತನಾಡಿ, ಗೀತಾಜ್ಞಾನ ಯಜ್ಞ ಸಮಿತಿಯ ತರಗತಿಗಳನ್ನು ಅಂತರ್ಜಾಲದ ಮೂಲಕ ನಡೆಸುತ್ತಿದ್ದಾರೆ. ರಜಾದಿನಗಳಲ್ಲಿ ಮೊಬೈಲ್ ನಲ್ಲಿ ಸುಮ್ಮನೆ ಆಡುತ್ತಾ ಕಾಲಕಳೆಯದೆ ಇಂತಹ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಉತ್ತಮ ಸಂಸ್ಕೃತಿಯನ್ನು ಬೆಳೆಸಿಕೊಳ್ಳಿ ಎಂದು ಕಿವಿಮಾತುಗಳನ್ನಾಡಿದರು.
ಶಾಲಾ ಉಪಪ್ರಾಂಶುಪಾಲರಾದ ರಾಮ ದೇವಾಡಿಗರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಶಿಕ್ಷಕರಾದ ರಾಮಕೃಷ್ಣ ಉಡುಪ ಕಾರ್ಯಕ್ರಮವನ್ನು ನಿರ್ವಹಿಸಿದರು.
ವೇದಿಕೆಯಲ್ಲಿ ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮಿ ಎಮ್. ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬಹಳಷ್ಟು ಗೀತಾಭ್ಯಾಸಿಗಳು, ಗೀತಾ ಜ್ಞಾನಯಜ್ಞ ಸಮಿತಿಯ ವಿವಿಧ ಪದಾಧಿಕಾರಿಗಳು, ಶಿಕ್ಷಕ ಶಿಕ್ಷಕೇತರವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.















