ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಹಿಳೆಯರು ತಮಗಿರುವ ಹಕ್ಕುಗಳನ್ನು ತಿಳಿದುಕೊಳ್ಳಬೇಕು. ಮುಖ್ಯವಾಗಿ ವೈಯಕ್ತಿಕ ನೆಲೆಯಲ್ಲಿ ಯೋಚಿಸಬೇಕು. ತನ್ನ ಬದುಕಿನುದ್ದಕ್ಕೂ ಬರುವಂತಹ ಸವಾಲುಗಳನ್ನು ಎದುರಿಸುವುದಕ್ಕೆ ಸಿದ್ಧವಾಗುವುದಕ್ಕೆ ತಯಾರಾಗಿರಬೇಕು ಎಂದು ಉಡುಪಿಯ ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಆಡಳಿತಾಧಿಕಾರಿ ಮತ್ತು ಸಲಹೆಗಾರರಾದ ಸೌಜನ್ಯ ಶೆಟ್ಟಿ ಹೇಳಿದರು.
ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಹಿಳಾ ವೇದಿಕೆಯ ಆಶ್ರಯದಲ್ಲಿ ನಡೆದ “ಮಹಿಳಾ ಕಿರುಕುಳ ವಿರೋಧಿ ಕೋಶ 2025-26” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ, ಆರ್ಥಿಕ, ಸಾಮಾಜಿಕ, ಉದ್ಯೋಗ, ಕಾನೂನು ಜ್ಞಾನ ಇವೆಲ್ಲವುಗಳನ್ನು ತಿಳಿದಿರಬೇಕು. ಮುಖ್ಯವಾಗಿ ಯುವತಿಯರು ತಮ್ಮ ಹದಿಹರೆಯದಲ್ಲಿ ಬರುವಂತಹ ಸಮಸ್ಯೆಗಳು ಬರದಂತೆ ಜಾಗೃತರಾಗಬೇಕು. ಅಲ್ಲದೆ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಿಂದ ಮಹಿಳೆಯರು ಮತ್ತು ಯುವತಿಯರು ಮೋಸಕ್ಕೆ ಒಳಗಾಗುತ್ತಿರುವದು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳ ಬಳಕೆ ಇತಿಮಿತಿಯಲ್ಲಿರಲಿ. ಈಗಿನ ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಖಾಸಗಿ ಫೋಟೊ ಮತ್ತು ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಪ ಲೋಡ್ ಮಾಡುವಾಗ ಸೊಸೆ ತುಂಬಾ ಜಾಗೃತರಾಗಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಮಾತನಾಡಿ, ಮಹಿಳೆಯರಿಗೆ ಎಲ್ಲಿ ಗೌರವ ಸಿಗುತ್ತದೆಯೋ ಆ ನಾಡು ಸಂಸ್ಕ್ರತಿ ಸುಭಿಕ್ಷವಾಗಿರುತ್ತದೆ. ಅಲ್ಲದೆ ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅದು ಅವರ ಸಾಧನೆಗೆ ಹಿಡಿದ ಕನ್ನಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಿಳಾ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು. ಉಪನ್ಯಾಸಕಿ ವಿದ್ಯಾರಾಣಿ ಅತಿಥಿಗಳನ್ನು ಪರಿಚಯಿಸಿದರು. ಕಾಲೇಜಿನ ಮಹಿಳಾ ವೇದಿಕೆಯ ಸಂಚಾಲಕರಾದ ಸ್ನೇಹಾ ಎಸ್., ಸ್ವಾಗತಿಸಿ, ವಿದ್ಯಾರ್ಥಿನಿಯರಾದ ಧೃತಿ ಕಾರ್ಯಕ್ರಮ ನಿರೂಪಿಸಿ, ಶೋಭಿತಾ ವಂದಿಸಿದರು.















