ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಾಲೇಜು ಪದವಿ ಜೊತೆಗೆ ಕ್ರೀಯಾತ್ಮಕ ಚಟುವಟಿಕೆಗಳು ಎಷ್ಟು ನಡೆಯುತ್ತದೆ ಎಂಬುದು ಮುಖ್ಯ. ಗುಣಾತ್ಮಕ ಚಟುವಟಿಕೆಗಳು ವಿದ್ಯಾರ್ಥಿಗಳನ್ನು ಮಾನಸಿಕ ಹಾಗೂ ಬೌದ್ಧಿಕವಾಗಿ ಗಟ್ಟಿಗೊಳಿಸುತ್ತವೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.


ಅವರು ಶುಕ್ರವಾರ ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿ ಇದರ 2025-26ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಪರಿಷತ್ತು ಹಾಗೂ ವಿವಿಧ ಚಟುವಟಿಕೆಗಳು ಮತ್ತು ಸುರಭಿ ರಿ. ಸಹಯೋಗದೊಂದಿಗೆ ನಡೆಯುವ ರಂಗ ತರಬೇತಿ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಬೈಂದೂರು ಸರಕಾರಿ ಪದವಿ ಕಾಲೇಜು ಗುಣಮಟ್ಟದ ಶಿಕ್ಷಣ ಹಾಗೂ ಪಠ್ಯೇತರ ಚಟುವಟಿಕೆಗಳ ಪಾಲ್ಗೊಳ್ಳುವಿಕೆಯಲ್ಲಿ ಮಾದರಿಯಾಗಿ ರೂಪುಗೊಳ್ಳುತ್ತಿದೆ. ಪ್ರಾಂಶುಪಾಲರು ಮತ್ತು ಉಪನ್ಯಾಸಕರ ತಂಡವೂ ಅದಕ್ಕೆ ಪೂರಕವಾಗಿ ತೊಡಗಿಸಿಕೊಂಡಿದೆ. ಸಂಸ್ಥೆಯ ಮೂಲಭೂತ ಸೌಕರ್ಯವನ್ನು ಸರಕಾರ ಅಥವಾ ಸರಕಾರೇತರ ಸಂಸ್ಥೆಗಳ ಮೂಲಕ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಜಿ.ಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಅವರು ಮಾತನಾಡಿ, ಯುವ ಮನಸ್ಸುಗಳಲ್ಲಿ ಸಕಾರಾತ್ಮಕ ಅಂಶಗಳನ್ನು ತುಂಬುತ್ತಾ, ಅವರನ್ನು ಸಮಾಜ ಕಟ್ಟುವ ಕಾರ್ಯದಲ್ಲಿ ತೊಡಗುವಂತೆ ಮಾಡುವಲ್ಲಿ ಉಪನ್ಯಾಸಕರ ಪಾತ್ರ ದೊಡ್ಡದಿದೆ. ವಿದ್ಯಾರ್ಥಿಗಳಿಗೂ ಇದೊಂದು ಸದಾವಕಾಶವಾಗಿದ್ದು ವ್ಯಕ್ತಿತ್ವವನ್ನು ಪರಿಪೂರ್ಣಗೊಳಿಸಲು ಸಹಕಾರಿಯಾಗಲಿದೆ ಎಂದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುತ್ತಯ್ಯ ಪೂಜಾರಿ, ವಲಯ ಅರಣ್ಯಾಧಿಕಾರಿ ಸಂದೇಶ್ ಕುಮಾರ್, ಜಿಪಂ ಮಾಜಿ ಸದಸ್ಯ ಸುರೇಶ್ ಬಟ್ವಾಡಿ, ಸುರಭಿ ಅಧ್ಯಕ್ಷರಾದ ಆನಂದ ಮದ್ದೋಡಿ, ರಂಗ ನಿರ್ದೇಶಕ ಗಣೇಶ್ ಮಂದಾರ್ತಿ, ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು.
ವಿವಿಧ ಪ್ರಠ್ಯೇತರ ಚಟುವಟಿಕೆಗಳ ಪ್ರತಿನಿಧಿಗಳಿಗೆ ಬ್ಯಾಜ್ಡ್ ಹಸ್ತಾಂತರಿಸಲಾಯಿತು. ಉಪನ್ಯಾಸಕಿ ಚಿತ್ರಾ ಪಡಿಯಾರ್ ಕಾಲೇಜಿನ ಚಟುವಟಿಕೆಗಳ ಪರಿಚಯ ಮಾಡಿದರು. ಉಪನ್ಯಾಸಕ ಶಿವಕುಮಾರ್ ವಿದ್ಯಾರ್ಥಿ ಪ್ರತಿನಿಧಿಗಳ ಯಾದಿ ವಾಚಿಸಿದರು. ವಿದ್ಯಾರ್ಥಿಗಳಾದ ರಂಜನಿ, ನಮೃತಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಸುಚಿತ್ರಾ ವಂದಿಸಿದರು.
ಇದನ್ನೂ ಓದಿ ► ಸುರಭಿ ಬೈಂದೂರು – ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆ: ನಾಟಕ ತಂಡಗಳಿಗೆ ಭಾಗವಹಿಸಲು ಆಹ್ವಾನ – https://kundapraa.com/?p=91563 .















