ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕು ಕಚೇರಿಯಲ್ಲಿ ತಾಲೂಕಿನ ಜನ ಸಾಮಾನ್ಯರು ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ನೀಡಿರುವ ಅರ್ಜಿಗಳನ್ನು ವಿಲೇವಾರಿ ಮಾಡದೇ ವಿನಾಕಾರಣ ವಿಳಂಬ ಮಾಡುತ್ತಿರುವ ಬಗ್ಗೆ ಇತ್ತೀಚಿಗೆ ಹಲವು ದೂರುಗಳು ಬಂದ ಹಿನ್ನಲೆಯಲ್ಲಿ ತಾಲೂಕು ಕಚೇರಿಗೆ ಬರುವ ಜನ ಸಾಮಾನ್ಯರ ಕೆಲಸವನ್ನು ಮಾಡಿಕೊಡಲು ವಿಳಂಬ ಮಾಡಿದರೆ ಹಾಗೂ ಸತಾಯಿಸಿದರೆ ಸಹಿಸಲು ಸಾಧ್ಯವಿಲ್ಲ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಎಚ್ಚರಿಕೆ ನೀಡಿದರು.
ಅವರು ತಾಲೂಕು ಕಚೇರಿ ಪ್ರಜಾ ಸೌಧದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಿಬ್ಬಂದಿಗಳ ಕಾರ್ಯ ವೈಖರಿ ಬಗ್ಗೆ ವಿವಿಧ ವಿಷಯ ನಿರ್ವಾಹಕ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡು ಮಾತನಾಡಿದರು. ಕಚೇರಿಗೆ ಸಿಬ್ಬಂದಿಗಳು ತಮ್ಮ ಸ್ವಭಾವ ಹಾಗೂ ಕಾರ್ಯ ವೈಖರಿಯನ್ನು ಜನ ಸಾಮಾನ್ಯರಿಗೆ ಅನುಕೂಲವಾಗುವಂತೆ ಬದಲಾಯಿಸಿಕೊಳ್ಳಬೇಕು ಎಂದು ತಾಕೀತು ಮಾಡಿದರು. ಕಚೇರಿಗೆ ಬರುವ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡದೇ ಕಚೇರಿಯೊಳಗೆ ಅಲೆದಾಡಿಸದೇ ಸರಿಯಾದ ಮಾಹಿತಿ ನೀಡಲು ಮಾಹಿತಿ ಕೇಂದ್ರದ ವ್ಯವಸ್ಥೆ ಮಾಡಬೇಕು.
ಆರ್.ಆರ್.ಟಿ, 11 ಇ, ಸಾಕಷ್ಟು ಅರ್ಜಿಗಳು ಬಾಕಿ ಇದ್ದು ಅದನ್ನು ತ್ವರಿತವಾಗಿ ವಿಲೇವಾರಿ ಮಾಡಲು ಆಂದೋಲನ ಮಾದರಿ ಅನುಸರಿಸಬೇಕು. ಅಭಿಲೇಖಾಲಯದಲ್ಲಿ ಸಾರ್ವಜನಿಕರು ಕೇಳುವ ದಾಖಲೆಗಳು, ಅಕ್ರಮ ಸಕ್ರಮ, 94 ಸಿ., ಸಂಧ್ಯಾ ಸುರಕ್ಷಾ ಮತ್ತು ವೃದ್ಧಾಪ್ಯ ವೇತನ ಅರ್ಜಿಗಳನ್ನು ಶೀಘ್ರವಾಗಿ ಮಂಜೂರು ಮಾಡಲು ಕ್ರಮ ವಹಿಸಲು ಸೂಚನೆ ನೀಡಿದರು.
ಸಭೆಯಲ್ಲಿ ತಾಲೂಕು ತಹಶೀಲ್ದಾರ್ ರಾಮ ಚಂದ್ರಪ್ಪ, ಕೆಡಿಪಿ ಸದಸ್ಯರು ಹಾಗೂ ಉಪ ತಹಸೀಲ್ದಾರ್ ಗಳು ಹಾಗೂ ಕಚೇರಿ ಸಿಬ್ಬಂದಿ ಗಳು ಉಪಸ್ಥಿತರಿದ್ದರು.















