ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ತಂತ್ರಜ್ಞಾನ, ವೈದ್ಯಕೀಯ, ಮೆಕ್ಯಾನಿಕ್, ಬೋಧನೆ ಸೇರಿದಂತೆ ಹತ್ತಾರು ರೀತಿಯ ಉದ್ಯೋಗದ ಅವಕಾಶಗಳು ಸೇನೆಯಲ್ಲಿ ಇವೆ. ಅದನ್ನು ಅರಿತುಕೊಂಡು ಸದ್ಬಳಕೆ ಮಾಡಿಕೊಳ್ಳುವಲ್ಲಿ ಇಂದಿನ ಯುವ ಪೀಳಿಗೆ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಮಾಜಿ ಸೈನಿಕರು, ಲೇಖಕರು ಆಗಿರುವ ಬೈಂದೂರು ಚಂದ್ರಶೇಖರ ನಾವುಡ ಅಭಿಪ್ರಾಯಪಟ್ಟರು.
ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ, ಎಸ್.ವಿ ಕಾಮರ್ಸ್ ಕ್ಲಬ್ ಗಂಗೊಳ್ಳಿ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಶ್ರೀ ನಾರಾಯಣ ಗುರು ಜನ ಸೇವಾ ಬಳಗದ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ರೋಟರಿ ಸಭಾಂಗಣದಲ್ಲಿ ನಡೆದ ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶಗಳ ಕುರಿತಾದ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸೈನ್ಯ ಸೇರುವುದೆಂದರೆ ಕೇವಲ ಯುದ್ಧ ಮಾಡುವುದು ಎಂದು ಅರ್ಥವಲ್ಲ. ದೇಶಪ್ರೇಮದ ಮನೋಭಾವನೆಯೊಂದಿಗೆ ಅಲ್ಲಿರುವ ವಿವಿಧ ಉದ್ಯೋಗಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಉತ್ತಮವಾದ ಬದುಕನ್ನು ಕಟ್ಟಿಕೊಳ್ಳಲು ಕೂಡ ಸಾಧ್ಯವಿದೆ ಎಂದರು.
ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ. ಸಿ. ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಬೈಂದೂರು ಚಂದ್ರಶೇಖರ ನಾವುಡ ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು. ಕಾಲೇಜಿನ ಕಾಮರ್ಸ್ ವಿದ್ಯಾರ್ಥಿನಿ ಯಕ್ಷಗಾನ ಕಲಾವಿದೆ ಅದಿತಿ ಖಾರ್ವಿಯನ್ನು ಅಭಿನಂದಿಸಲಾಯಿತು.
ಶ್ರೀ ನಾರಾಯಣಗುರು ಜನ ಸೇವಾ ಬಳಗದ ಉಪಾಧ್ಯಕ್ಷೆ ಮಮತಾ ಶುಭ ಹಾರೈಸಿದರು. ವಿದ್ಯಾರ್ಥಿ ಪ್ರತಿನಿಧಿ ಅಭಿಜ್ಞಾ ಖಾರ್ವಿ, ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಅಕ್ಷಯ ಖಾರ್ವಿ ಉಪಸ್ಥಿತರಿದ್ದರು.
ಎಸ್.ವಿ. ಕಾಮರ್ಸ್ ಕ್ಲಬ್ ಸಂಯೋಜಕ ನರೇಂದ್ರ ಎಸ್. ಗಂಗೊಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದೀಪಾಲಿ ಮತ್ತು ಅದಿತಿ ಪ್ರಾರ್ಥಿಸಿದರು. ಸಾನಿಕ ಪೂಜಾರಿ ಅತಿಥಿಗಳನ್ನು ಪರಿಚಯಿಸಿದರು. ಮಾದರಿ ಸ್ವಾಗತಿಸಿ, ಪ್ರಾರ್ಥನ ಪೈ ನಿರೂಪಿಸಿ, ನಿಸರ್ಗ ವಂದಿಸಿದರು.















