ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ಶನಿವಾರಕನ್ನಡ ವಿಭಾಗ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕುಂದಾಪುರ ಹಾಗೂ ಸುವ್ವಿ ಪಬ್ಲಿಕೇಷನ್ಸ್ ಶಿಕಾರಿಪುರ ಇದರ ಸಂಯುಕ್ತ ಆಶ್ರಯದಲ್ಲಿ ವೈದೇಹಿಯವರ ಸಾಹಿತ್ಯ ಮರುಚಿಂತನೆ ಕುರಿತು ಒಂದು ದಿನದ ರಾಷ್ಟ್ರಮಟ್ಟದ ವೆಬಿನಾರ್ ಮತ್ತು ಕೃತಿ ಲೋಕಾರ್ಪಣೆ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಅನುಪಮ ಎಸ್. ಶೆಟ್ಟಿ ಮಾತನಾಡಿ, ವೈದೇಹಿಯವರು ಕುಂದಾಪುರ ಮಹಿಳೆಯರ ಕಷ್ಟಗಳನ್ನು ತಮ್ಮದೇ ಆದ ಭಾಷೆಗಳಲ್ಲಿ ಬರೆಯುತ್ತಿದ್ದರು ಮತ್ತು ಮಹಿಳಾ ಜೀವನದ ಎಲ್ಲಾ ಮಜಲುಗಳನ್ನು ಅವರ ಕೃತಿಗಳಲ್ಲಿ ಕಾಣಬಹುದಾಗಿದೆ ಎಂದರು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಕೇರಳ ಕೇಂದ್ರೀಯ ವಿಶ್ವ ವಿದ್ಯಾನಿಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸೌಮ್ಯ ಹೇರಿಕುದ್ರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ವೈದೇಹಿಯವರ ಕಥೆಗಳಲ್ಲಿ ಸ್ತ್ರೀ ಸಾಮಾನ್ಯರನ್ನು ಕೇಂದ್ರೀಕರಿಸಿ ಸುಮಾರು 70 ಮತ್ತು 80ರ ದಶಕದ ಮಹಿಳೆಯ ಕಷ್ಟ ಮತ್ತು ಬದುಕಿನಲ್ಲಿ ಎದುರಾಗುವ ಸವಾಲುಗಳ ಬಗ್ಗೆ ಹಾಗೂ ಕುಂದಾಪುರ ಪರಿಸರದ ಜನಸಮುದಾಯದ ಭಾವನೆ ಮತ್ತುಬದುಕುಗಳ ಬಗ್ಗೆ ಸಮಾಜದಿಂದ ನಿರ್ಲಕ್ಷಕ್ಕೆ ಒಳಗಾದ ಮಹಿಳೆಯರ ಅಸ್ಮಿತೆ ಮತ್ತು ಸಂವೇದನೆಗಳನ್ನು ಅವರ ಕೃತಿಗಳಲ್ಲಿ ಅಡಕವಾಗಿರುವುದರಿಂದ ವಿದ್ಯಾರ್ಥಿಗಳು ಅವರ ಸಾಹಿತ್ಯವನ್ನು ಓದಿ ಮರುಚಿಂತನೆ ಮಾಡಲು ಹಮ್ಮಿಕೊಂಡಿರುವ ಇಂತಹ ಕಾರ್ಯಕ್ರಮ ಶ್ಲಾಘನೀಯ ಎಂದರು.
ವೈದೇಹಿಯವರ ಸಾಹಿತ್ಯ ಮರುಚಿಂತನೆ ಕುರಿತಂತೆ ಕೃತಿ ಲೋಕಾರ್ಪಣೆಯನ್ನು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಹಯವದನ ಉಪಾಧ್ಯ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರಾವತಿ ಶೆಟ್ಟಿ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಶಿಕಾರಿಪುರ ಸುವ್ವಿ ಪಬ್ಲಿಕೇಷನ್ಸ್ ಪ್ರಕಾಶಕರಾದ ಸುನಿಲ್ ಕುಮಾರ್ ಬಿ.ಎನ್ ಮತ್ತು ಕಾಲೇಜಿನ ಆಡಳಿತಾಧಿಕಾರಿ ಮೋಹನ್ ಕೆ.ಎನ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಯೋಜಕ ಮತ್ತು ವಿಭಾಗದ ಮುಖ್ಯಸ್ಥರಾದ ಕುಮಾರ ಪಿ. ಸ್ವಾಗತಿಸಿ, ಪ್ರಸ್ತಾವಿಕ ಮಾತನ್ನಾಡಿದರು. ಉಪನ್ಯಾಸಕರಾದ ಅಕ್ಷಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ಉಪನ್ಯಾಸಕಿ ಪ್ರಮೀಳಾ ಧನ್ಯವಾದಗೈದರು.















