ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಗಂಗೊಳ್ಳಿ ಪೊಲೀಸರು ವಶಕ್ಕೆ ಪಡೆದು, ಓರ್ವನನ್ನು ಬಂಧಿಸಿದ್ದಾರೆ.
ಶುಕ್ರವಾರದಂದು ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತ್ರಾಸಿ ಗ್ರಾಮದ ಬೀಚ್ ಹತ್ತಿರದ ಕ್ರಾಸ್‌ಬಳಿ ಬೈಂದೂರು – ಕುಂದಾಪುರ ರಾ.ಹೆ-66ರ ಬಳಿಯ ರಸ್ತೆಯಲ್ಲಿ ಕುಂದಾಪುರ ಆಹಾರ ನಿರೀಕ್ಷಕ ಸುರೇಶ್ ಹೆಚ್.ಎಸ್ ಅವರಿಗೆ ಲಾರಿಯಲ್ಲಿ ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಕಾನೂನು ಬಾಹಿರವಾಗಿ ರವಾನಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ, ಗಂಗೊಳ್ಳಿ ಪೊಲೀಸ್ ಠಾಣಾ ಸಿಬ್ಬಂದಿಗಳೊಂದಿಗೆ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.
ಈ ವೇಳೆ ಲಾರಿಯಲ್ಲಿ ಚಾಲಕ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕಲ್ಯಾಣಪುರ ಸೋಲೂರು ಹೋಬಳಿ ನಂಜುಂಡ ಕೆ.ಆರ್ (28) ಎಂಬಾತನನ್ನು ಲಾರಿಯಲ್ಲಿರುವ ಲೋಡಿನ ಬಗ್ಗೆ ವಿಚಾರಿಸಿದಾಗ ಅಕ್ಕಿಯ ಚೀಲ ಎಂಬುದಾಗಿ ತಿಳಿಸಿದ್ದಾನೆ.
ಭಟ್ಕಳದ ಶಫೀಕ್ ಸಾಹೇಬ್ ಎನ್ನುವವರು ತನ್ನ ಲಾರಿ 214 ಚೀಲ ಗಳಲ್ಲಿ ಒಟ್ಟು 107 ಕ್ವಿಂಟಾಲ್ ಅಕ್ಕಿಯನ್ನು ಲಾರಿಗೆ ತುಂಬಿಸಿ ಲೋಡ್ ಮಾಡಿದ್ದು, ಶ್ರೀ ಬಸವೇಶ್ವರ ಅಗ್ರೋ ರೈಸ್ ಇಂಡಸ್ಟ್ರೀಸ್ 2 ನೇ ಅಡ್ಡ ರಸ್ತೆ ಎಂ. ಜಿ. ರಸ್ತೆ ಮಂಡ್ಯ ಎನ್ನುವವರ ರೈಸ್ ಮಿಲ್ಲಿಗೆ ತಲುಪಿಸಲು ಕಳುಹಿಸಿದ್ದು ಎಂಬುದಾಗಿ ತಿಳಿಸಿರುತ್ತಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತನಿಂದ 107 ಕ್ವಿಂಟಾಲ್ ಅಕ್ಕಿಯನ್ನು ಅಂದಾಜು 2,56,800/- ರೂ. ,ಸಾಗಾಟ ಮಾಡಲು ಬಳಿಸಿದ ಲಾರಿ, ಟಾಟಾ ಕಂಪೆನಿಯ ಲಾರಿಯನ್ನು ಅಂದಾಜು ಮೌಲ್ಯ 11,00,000/ ರೂ ಅನ್ನು ಸ್ವಾಧೀನ ಪಡಿಸಿಕೊಂಡಿರುವುದಾಗಿದೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಗೊಳ್ಳಿ ಪೊಲೀಸ್ ಠಾಣಾ ಪಿ ಎಸ್ ಐ ಅವರಾದ ಪವನ್ ನಾಯಕ್ (ಕಾ & ಸು) ಹಾಗೂ ನವೀನ್ ಎ.ಎಸ್ ಸಿಬ್ಬಂದಿಗಳಾದ ಕೃಷ್ಣ ದೇವಾಡಿಗ, ರಾಜು ನಾಯ್ಕ, ಸಂದೀಪ ಕುರಣಿ, ರಾಘವೇಂದ್ರ ಪೂಜಾರಿ, ರಿತೇಶ್ ಕುಮಾರ್ ಶೆಟ್ಟಿ, ಮಾಳಿಂಗರಾಯ ಹೆಬ್ಬಾಳ, ಮಲ್ಲಪ್ಪ ಗೌಡ ಕಾರ್ಯಾಚರಣೆಯಲ್ಲಿ ಭಾಗಹಿಸಿರುತ್ತಾರೆ.
ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ತಂಡಕ್ಕೆ ಮಾನ್ಯ ಪೊಲೀಸ್ ಅಧೀಕ್ಷಕರಾದ ಹರಿರಾಂ ಶಂಕರ್ – ಐ ಪಿ ಎಸ್ ಅವರು ಅಭಿನಂದಿಸಿರುತ್ತಾರೆ.















