ಗಂಗೊಳ್ಳಿ : 1890ರ ದಶಕದಲ್ಲಿ ಆರಂಭವಾಗಿದ್ದ ಎಸ್.ವಿ. ವಿದ್ಯಾಸಂಸ್ಥೆಗಳು ನಿರಂತರವಾಗಿ ಸುತ್ತಮುತ್ತಲಿನ ಸಹಸ್ರಾರು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸ ನೀಡುವ ಮೂಲಕ ವಿದ್ಯಾ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನಮಾನವನ್ನು ಪಡೆದುಕೊಂಡಿದೆ. ಶಾಲೆಯ ಆರಂಭಿಸುವ ಸಮಯದಲ್ಲಿ ನಮ್ಮ ಹಿರಿಯರು ಪಟ್ಟ ಪರಿಶ್ರಮ ಹಾಗೂ ಹಿರಿಯರ ದೂರದೃಷ್ಟಿಯ ಫಲವಾಗಿ ಸರಸ್ವತಿ ವಿದ್ಯಾಲಯ ವಿದ್ಯಾಸಂಸ್ಥೆಯ ಸಾಧನೆ ವಿಶಿಷ್ಟ ಹಾಗೂ ಶ್ರೇಷ್ಠವಾದುದು ಎಂದು ಗಂಗೊಳ್ಳಿ ಜಿಎಸ್‌ವಿಎಸ್ ಅಸೋಸಿಯೇಶನ್ ಅಧ್ಯಕ್ಷ ಡಾ.ಕಾಶೀನಾಥ ಪೈ ಹೇಳಿದರು.
ಅವರು ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಕೆನರಾ ಬ್ಯಾಂಕಿನ ನಿವೃತ್ತ ಸೀನಿಯರ್ ಮ್ಯಾನೇಜರ್ ಬಾಂಡ್ಯ ಪಾಂಡುರಂಗ ಪೈ ಬೆಂಗಳೂರು ಶುಭಾಶಂಸನೆಗೈದರು. ಶಾಲೆಯ ಸಂಚಾಲಕ ಎನ್.ಸದಾಶಿವ ನಾಯಕ್ ಉಪಸ್ಥಿತರಿದ್ದರು. ಶಾಲೆಯ ಪ್ರಾಕ್ತನ ವಿದ್ಯಾರ್ಥಿ, ಸುರತ್ಕಲ್‌ನ ಶ್ರೀನಿವಾಸ ಆಸ್ಪತ್ರೆಯ ಜನರಲ್ ಸರ್ಜನ್ ಡಾ.ಭರತ್ ಕುಮಾರ್ ಭಟ್ ಸ್ವಸ್ತಿವಾಚನಗೈದರು. ಈ ಸಂದರ್ಭ ಶಾಲೆಯ ಉತ್ತಮ ಆದರ್ಶ ವಿದ್ಯಾರ್ಥಿನಿ ಸುನೀತಾ ಪೂಜಾರಿ ಅವರಿಗೆ ಬಾಂಡ್ಯ ರಾಮರಾಮ ಪೈ ಸ್ಮಾರಕ ಅವರ ಮಕ್ಕಳಾದ ಬಾಂಡ್ಯ ಪಾಂಡುರಂಗ ಪೈ ಮತ್ತು ಸಹೋದರರಿಂದ ಕೊಡಲ್ಪಟ್ಟ ಚಿನ್ನದ ಪದಕ ಹಾಗೂ ಬಾಂಡ್ಯ ವರದಾ ಪೈ ಸ್ಮಾರಕ ಅವರ ಮಕ್ಕಳಾದ ಬಾಂಡ್ಯ ಪಾಂಡುರಂಗ ಪೈ ಮತ್ತು ಸಹೋದರರಿಂದ ಕೊಡಲ್ಪಟ್ಟ ನಿಧಿಯನ್ನು ನೀಡಿ ಗೌರವಿಸಲಾಯಿತು. ರಾಷ್ಟ್ರ ಮಟ್ಟದ ಟೆನ್ನಿಕಾಯ್ಟ್ ಆಟಗಾರ ಪ್ರಜ್ವಲ್ ಖಾರ್ವಿ ಅವರನ್ನು ಗೌರವಿಸಲಾಯಿತು. ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಇತ್ತೀಚಿಗೆ ನಿಧನರಾದ ಶಾಲೆಯ ಜಿಎಸ್‌ವಿಎಸ್ ಅಸೋಶಿಯೇಶನ್‌ನ ಅಧ್ಯಕ್ಷರಾಗಿದ್ದ ಬೈಲೂರು ಮಂಜುನಾಥ ಶೆಣೈ ಅವರಿಗೆ ಪುಷ್ಪನಮನ ಸಲ್ಲಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಆರ್.ಎನ್.ರೇವಣ್‌ಕರ್ ಸ್ವಾಗತಿಸಿ ವರದಿ ವಾಚಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ನಾಗರಾಜ ಶೆಟ್ಟಿ, ಉಪನ್ಯಾಸಕ ಪ್ರವೀಣ ಕಾಮತ್, ರಾಘವೇಂದ್ರ ಭಟ್ ಹಾಗೂ ಸಹಶಿಕ್ಷಕ ಆದಿನಾಥ ಕಿಣಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಉಪನ್ಯಾಸಕ ನಾರಾಯಣ ನಾಯ್ಕ್ ಸಂದೇಶ ವಾಚಿಸಿದರು. ಪ್ರಸಾದ್ ಭಟ್ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿಯರಾದ ದಿಶಾ ಭಟ್, ನಿಖಿಲ್ ಖಾರ್ವಿ ಶಾಜಿಯಾ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ವಾಮನದಾಸ ಭಟ್ ವಂದಿಸಿದರು.