ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಾಲೇಜು ವಿದ್ಯಾರ್ಥಿಯೊಬ್ಬ ವೈಯಕ್ತಿಕ ಕಾರಣಗಳಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಇತ್ತೀಚಿಗೆ ನಾವುಂದದಲ್ಲಿ ನಡೆದಿದೆ. ನಾವುಂದ ನಿವಾಸಿ ದಯಾನಂದ ಜೋಗಿ ಅವರ ಮಗ ಸ್ಕಂದ (16) ಮೃತಪಟ್ಟ ವಿದ್ಯಾರ್ಥಿ.
ಅ. 26ರಂದು ಸಂಜೆ ಸ್ಕಂದ ತಾನು ಮನೆಯ ಮಲಗುವ ಕೋಣೆಯಲ್ಲಿ ಫ್ಯಾನಿಗೆ ಚೂಡಿದಾರದ ಶಾಲನ್ನು ಕಟ್ಟಿ ಕುತ್ತಿಗೆಗೆ ಉರುಳು ಹಾಕಿಕೊಂಡಿದ್ದರು. ಅದನ್ನು ಗಮನಿಸಿದ ಮನೆಯವರು ಚಿಕಿತ್ಸೆಗೆ ಕುಂದಾಪುರದ ಆಸ್ಪತ್ರೆಗೆ ಕರೆದುಕೊಂಡು ಹೋದರು. ಪರೀಕ್ಷಿಸಿದ ವೈದ್ಯರು ಚಿಕಿತ್ಸೆಗೆ ಬರುವ ದಾರಿಮಧ್ಯದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿಸಿದರು.
ಎಸೆಸೆಲ್ಸಿ ವರೆಗೆ ಹುಟ್ಟೂರಿನಲ್ಲಿ ಕಲಿತಿದ್ದ ಸ್ಕಂದ ಅವರನ್ನು ಪಿಯುಸಿ ಶಿಕ್ಷಣಕ್ಕೆ ಬೆಂಗಳೂರಿನ ಕಾಲೇಜಿನಲ್ಲಿ ವಾಣಿಜ್ಯ ವಿಭಾಗಕ್ಕೆ ದಾಖಲಿಸಲಾಗಿತ್ತು.ಚಿಕ್ಕಮ್ಮನ ಮನೆಯಲ್ಲಿ ಇದ್ದುಕೊಂಡು ಕಾಲೇಜಿಗೆ ಹೋಗುತ್ತಿದ್ದರು. ದೀಪಾವಳಿಯ ರಜೆಯಲ್ಲಿ ಮನೆಗೆ ಬಂದಿದ್ದ ಅವರು ರಜೆ ಮುಗಿದ ಬಳಿಕ ಮರಳುವ ಮನಸ್ಸು ಮಾಡಿರಲಿಲ್ಲ. ಬೆಂಗಳೂರಿನಲ್ಲಿ ಕಲಿಯಲು ಇಷ್ಟವಿಲ್ಲದ ಕಾರಣ ಅಲ್ಲಿಗೆ ಹೋಗುವುದಕ್ಕೇ ಮನೆಯವರಲ್ಲಿ ನಿರಾಕರಿಸುತ್ತ ದಿನ ಕಳೆದಿದ್ದರು. ಹಲವು ಬಾರಿ ಬೆಂಗಳೂರಿಗೆ ಹೋಗಲು ಮಾಡಿದ್ದ ಬಸ್ ಟಿಕೆಟನ್ನು ಕೂಡ ರದ್ದು ಮಾಡಿಸಿಕೊಂಡಿದ್ದರು.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










