ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಬಸ್ರೂರು ನಾಟ್ಯಾಂಜಲಿ ಕಲಾ ನಿಕೇತನದಲ್ಲಿ ನೃತ್ಯಗುರು ವಿದುಷಿ ಕಲಾಶ್ರೀ ಪುನೀತ್ ಆಚಾರ್ಯ ಅವರು ತಮ್ಮ ನೃತ್ಯ ಶಿಷ್ಯೆಯರಿಗೆ ಗೆಜ್ಜೆಪೂಜೆ ಕಾರ್ಯಕ್ರಮವನ್ನು ಬಸ್ರೂರಿನ ಶ್ರೀ ದೇವಿ ಅಮ್ಮನವರ ದೇವಸ್ಥಾನದಲ್ಲಿ ಏರ್ಪಡಿಸಿದ್ದರು.
ಗೋಧೂಳಿಯ ಸಮಯದಲ್ಲಿ ತಾಯಿಗೆ ಪೂಜೆ ನೆರವೇರಿಸಿ ವಿದ್ಯಾರ್ಥಿಗಳ ಗೆಜ್ಜೆಗೆ ದೇವಿಯ ಸಮ್ಮುಖದಲ್ಲಿ ಪೂಜೆ ಸಲ್ಲಿಸಿ, ಪ್ರಸಾದದೊಂದಿಗೆ ಶಿಷ್ಯೆಯರಿಗೆ ಗೆಜ್ಜೆ ನೀಡಿ ಹರಸಿದರು ಮತ್ತು ವಿದ್ಯಾರ್ಥಿಗಳು ಗುರುಕಾಣಿಕೆ ನೀಡಿ ತಮ್ಮ ಗೌರವ ಅರ್ಪಿಸಿದರು. ಅಲ್ಲದೆ ಶ್ರೀ ದೇವಿಯ ಮುಂದೆ ತಮ್ಮ ತಮ್ಮ ಹೆಜ್ಜೆಗಳ ಪ್ರದರ್ಶನ ನೀಡಿ ಕಲಾ ಸೇವೆ ನೆರವೇರಿಸಿದರು.
ಸುಮಾರು 70 ರಿಂದ 75 ನೃತ್ಯಾಸಕ್ತ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಔಪಚಾರಿಕವಾಗಿ ವಿದುಷಿ ಕಲಾಶ್ರೀ ಪುನೀತ್ ಆಚಾರ್ಯರವರ ನೃತ್ಯ ಶಿಷ್ಯೆಯರಾಗಿ ಪಾದಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪೋಷಕರು, ಕುಟುಂಬದವರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.










