ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಯಳಜಿತ ಗ್ರಾಮದ ರಾ.ಹೆ. 766Cರ ಗೋಳಿಮರ ಕ್ರಾಸ್ ಬಳಿ ಕಿಯಾ ಸಲೂನ್ ಕಾರಿಗೆ, ಸುಜುಕಿ ಸ್ಕೂಟರ್ ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರನಿಗೆ ಗಂಭೀರ ಗಾಯಗಳಾಗಿದ್ದರೇ, ಸಹಸವಾರೆ ಮೃತಪಟ್ಟ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಬ್ರಹ್ಮಾವರದಿಂದ ಕೊಲ್ಲೂರು ಮಾರ್ಗವಾಗಿ ಗೋಳಿಹೊಳೆಯಲ್ಲಿರುವ ಅವರ ಸಂಭಂದಿಕರ ಮನೆಗೆ ಕುಟುಂಬಿಕರು ಕಾರಿನಲ್ಲಿ ತೆರಳುತ್ತಿದ್ದ ವೇಳೆ, ಕೊಲ್ಲೂರು ಕಡೆಯಿಂದ ಬೈಂದೂರು ಕಡೆಗೆ ಬರುತ್ತಿದ್ದ ಸುಜುಕಿ ಸ್ಕೂಟರ್ ಸವಾರ ಸುಭಾನ್ ಗೋಳಿಮರ ಕ್ರಾಸ್ ಬಳಿ ತನ್ನ ಸ್ಕೂಟರನ್ನು ತೀರ ಬಲ ಬದಿಗೆ ಚಲಾಯಿಸಿ ಫಿರ್ಯಾಧಿದಾರರ ಕಾರಿಗೆ ಎದುರಿನಿಂದ ಗುದ್ದಿದ್ದ ಪರಿಣಾಮ ಸ್ಕೂಟರ್ ಸವಾರ ಮತ್ತು ಸಹಸವಾರ ಇಬ್ಬರು ರಸ್ತೆಗೆ ಬಿದ್ದಿದ್ದರು.

ಸವಾರ ಹೆಲ್ ಮೇಟ್ ಧರಿಸಿದ್ದು ಆತನ ಕಾಲು ಮತ್ತು ಭುಜಕ್ಕೆ ಪೆಟ್ಟಾಗಿದ್ದು ಹಾಗೂ ಸಹ ಸವಾರಳಿಗೆ ರಸ್ತೆಗೆ ಬಿದ್ದ ಪರಿಣಾಮ ತಲೆಗೆ ಮತ್ತು ಕಾಲಿಗೆ ತೀವ್ರ ಪೆಟ್ಟಾಗಿರುತ್ತದೆ. ಇಬ್ಬರನ್ನೂ ಸ್ಥಳೀಯರು ಉಪಚರಿಸಿ 108 ಅಂಬುಲೆನ್ಸ್ ಮೂಲಕ ಕುಂದಾಪುರ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು. ನಂತರ ಗಾಯಗೊಂಡ ತಸ್ಬೀಯಾ ಬೇಗಂ ಕುಂದಾಪುರ ಆಸ್ಪತ್ರೆಗೆ ಸಾಗಿಸುವ ದಾರಿ ಮದ್ಯದಲ್ಲಿ ಮೃತಪಟ್ಟಿರುವುದು ತಿಳಿದುಬಂದಿದೆ. ಸ್ಕೂಟರ್ ಸವಾರರು ಶಿವಮೊಗ್ಗ ಜಿಲ್ಲೆಯ ಬಟ್ಟೆಮಲ್ಲಪ್ಪ ಮೂಲದವರೆಂದು ತಿಳಿದುಬಂದಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂಬುಲೆನ್ಸ್ ವಿಳಂಬ – ಸಾರ್ವಜನಿಕರ ಆಕ್ರೋಶ:
ಅಪಘಾತ ನಡೆಯುತ್ತಿದ್ದಂತೆ ಜಮಾಜಿಯಿಸಿದ ಎಳಜಿತ ಭಾಗದ ಸಾರ್ವಜನಿಕರು ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡುವ ಪ್ರಯತ್ನ ಮಾಡಿದ್ದರು. ಅಂಬುಲೆನ್ಸ್ಗೆ ಕರೆಮಾಡಿ 25 ನಿಮಿಷಗಳ ಬಳಿಕ ಸ್ಥಳಕ್ಕೆ ಬಂದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು. ಬೈಂದೂರು ಅಂಬುಲೆನ್ಸ್ ಲಭ್ಯವಿಲ್ಲ ಎಂದು ಕೊಲ್ಲೂರು ಅಂಬುಲೆನ್ಸ್ ಕಳುಹಿಸಿಕೊಡಲಾಗಿದ್ದು, ಇದು ವಿಳಂಬಕ್ಕೆ ಕಾರಣವಾಯಿತು. ಬೈಂದೂರಿನಲ್ಲಿ 108 ಹೊರತಾಗಿ ಬದಲಿ ಅಂಬುಲೆನ್ಸ್ ಇದ್ದರೂ ನಿರ್ವಹಣೆ ಇಲ್ಲದೇ ಸೊರಗಿದೆ. ಜನರ ಪ್ರಾಣಕ್ಕೆ ಬೆಲೆ ಇಲ್ಲವೇ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದರು.















