ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ ಉತ್ಸವ, ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿವಿಧ ಚದುರಂಗ 7 ಸ್ಪರ್ಧೆಗಳಲ್ಲಿ ತನ್ನ ಚತುರತೆಯಿಂದ ಗಮನ ಸೆಳೆದಿದ್ದಾನೆ.
ಬೇಸಿಗೆ ರಜೆಯನ್ನು ಆಟ-ಮನರಂಜನೆಗೆ ವ್ಯಯಿಸದೇ, ಸದುಪಯೋಗಪಡಿಸಿಕೊಂಡ ಈ ಪ್ರತಿಭಾವಂತ ವಿದ್ಯಾರ್ಥಿ ಮೈಸೂರಿನ ಬಿ.ಎಸ್.ಎಸ್. ಸ್ಕೂಲ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಎಫ್‌ಐಡಿಇ ರೇಟೆಡ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ ಸ್ಥಾನ ಹಾಗೂ ನಗದು ಬಹುಮಾನ ಪಡೆದು ತನ್ನ ಪ್ರತಿಭೆ ಚಾತುರ್ಯವನ್ನು ಜಗತ್ತಿಗೆ ಪರಿಚಯಿಸಿದ್ದಾನೆ.
ಅಷ್ಟೇ ಅಲ್ಲದೆ – ಮಂಗಳೂರು ಶಾರದಾ ವಿದ್ಯಾಲಯದಲ್ಲಿ ನಡೆದ ಚದುರಂಗ ಸ್ಪರ್ಧೆಯಲ್ಲಿ ಉತ್ಸವ 7ನೇ ಸ್ಥಾನವನ್ನು ಪಡೆದು ನಗದು ಬಹುಮಾನವನ್ನು ಪಡೆದಿದ್ದಾನೆ.
ಕೋಣನಕುಂಟೆ, ಬೆಂಗಳೂರು ಇಲ್ಲಿ ಆಯೋಜಿಸಲಾದ ಸ್ಟೇಟ್ ಅಮೇಚುರ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಆತ ಟ್ರೋಪಿ ಹಾಗೂ ನಗದು ಬಹುಮಾನವನ್ನು ಗೆದ್ದು ಮತ್ತೊಮ್ಮೆ ತನ್ನ ಸಾಮರ್ಥ್ಯ ತೋರಿಸಿದ್ದಾನೆ. ಇದೇ ರೀತಿಯಾಗಿ, ಮೈಸೂರಿನ ರೋಟರಿ ವೃಂದಾವನ್ ಸ್ಕೂಲ್‌ನಲ್ಲಿ ನಡೆದ ಎಫ್‌ಐಡಿಇ ರೇಟೆಡ್ ಕ್ಲಾಸಿಕಲ್ ಚಾಂಪಿಯನ್‌ಶಿಪ್‌ನಲ್ಲಿ ಸಹ ಟ್ರೋಪಿ ಮತ್ತು ನಗದು ಬಹುಮಾನವನ್ನು ಪಡೆದುಕೊಂಡು ನಿರಂತರ ಸಾಧನೆಯ ಪಥದಲ್ಲಿ ಮುಂದುವರಿದಿದ್ದಾನೆ.
ಈ ಸಾಧನೆಗಳ ಸರಪಳಿಯ ಮೂಲಕ ಉತ್ಸವ ತನ್ನ ಆಟದ ಮಟ್ಟವನ್ನು ನಿರಂತರವಾಗಿ ಮೆರೆದಿದ್ದು – ಸಮತೋಲಿತ ಮನೋಬಲ, ನಿಯಂತ್ರಿತ ಚಿಂತನೆ ಹಾಗೂ ಸಮಯ ನಿರ್ವಹಣೆಯ ಉದಾಹರಣೆ ಎನಿಸಿದ್ದಾನೆ.
ಕುಂದಾಪುರ ಮೂಲದ ಬಿ.ಪಿ. ಶೇಷಾಚಲ ಮತ್ತು ಸ್ಮಿತಾ ಎಚ್. ದಂಪತಿಗಳ ಪುತ್ರನಾದ ಉತ್ಸವ, ಪೋಷಕರ ಪ್ರೋತ್ಸಾಹ, ಶಿಕ್ಷಕರ ಮಾರ್ಗದರ್ಶನ ಹಾಗೂ ಸಂಸ್ಥೆಯ ಸತತ ಬೆಂಬಲದಿಂದ ಈ ಮಟ್ಟದ ಯಶಸ್ಸು ಕಂಡಿರುವುದಾಗಿ ಕುಟುಂಬ ಮತ್ತು ಶಾಲಾ ವಲಯ ತಿಳಿಸಿದೆ.
ಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರ ಮಾತನಾಡುಡಿ, ಸಾಧನೆ ಬಂದಾಗ ಶಾಲೆಯ ಹೆಮ್ಮೆ, ಸಮಾಜದ ಹೆಮ್ಮೆ, ರಾಷ್ಟ್ರದ ಹೆಮ್ಮೆ. ಅವಕಾಶಕ್ಕಾಗಿ ಕಾದವರಿಗಿಂತ ಅವಕಾಶವನ್ನು ಸೃಷ್ಟಿಸಿಕೊಳ್ಳುವವರು ಇತಿಹಾಸ ಬರೆಯುತ್ತಾರೆ. ಇದಕ್ಕೆ ಉದಾಹರಣೆ ಉತ್ಸವ. ಇವನು ಕೇವಲ ವಿದ್ಯಾರ್ಥಿಯಲ್ಲ, ವಿಜಯಶೀಲ ಮನೋಭಾವದ ಪ್ರತಿರೂಪ. ಎಂದರು.
ಅದೇ ವೇಳೆ ಆಡಳಿತಾಧಿಕಾರಿ ವೀಣಾ ರಶ್ಮಿ ಎಂ., ಉಪಪ್ರಾಂಶುಪಾಲ ಶ್ರ ರಾಮ ದೇವಾಡಿಗ, ಶಿಕ್ಷಕರ ತಂಡ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಉತ್ಸವನಿಗೆ ಅಭಿನಂದನೆ ಸಲ್ಲಿಸಿದರು.















