ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿಶ್ವದಾದ್ಯಂತ ನೆಲೆಸಿರುವ ಬೈಂದೂರು ವಿಧಾನಸಭಾ ಕ್ಷೇತ್ರದ ಜನರು, ಸರಕಾರ ಹಾಗೂ ಉದ್ಯಮಿಗಳು ಬೈಂದೂರಿನತ್ತ ತಿರುಗಿ ನೋಡುವಂತೆ ಮಾಡುವುದು ಮತ್ತು ಆ ಮೂಲಕ ವಿವಿಧ ಆಯಾಮಗಳಲ್ಲಿ ಬೈಂದೂರು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದು ಬೈಂದೂರು ಉತ್ಸವದ ಮೂಲ ಧ್ಯೇಯವಾಗಿದ್ದು, ಈ ನಿಟ್ಟಿನಲ್ಲಿ ಕಳೆದ ವರ್ಷ ಆಯೋಜಿಸಿದ ಬೈಂದೂರು ಉತ್ಸವ ಯಶಸ್ಸನ್ನು ಕಂಡಿದೆ. 2026ರಲ್ಲಿ ಉತ್ಸವವನ್ನು ಅರ್ಥಪೂರ್ಣವಾಗಿ ಆಯೋಜಿಸಲು ಸಿದ್ಧತೆ ನಡೆಸಿದ್ದು ಜನವರಿ 24, 25 ಹಾಗೂ 26ರಂದು ಬೈಂದೂರು ಉತ್ಸವದ ಕಾರ್ಯಕ್ರಮಗಳು ಹಾಗೂ ಅದಕ್ಕೆ ಪೂರಕವಾಗಿ ಮೊದಲೇ ಗ್ರಾಮೋತ್ಸವ ಕಾರ್ಯಕ್ರಮಗಳು ಜರುಗಲಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

ಅವರು ತ್ರಾಸಿಯ ಪ್ರೆಸ್ಟೀಜ್ ಸಭಾಭವನದಲ್ಲಿ ಜರುಗಿದ ಬೈಂದೂರು ಉತ್ಸವದ ದಿನಾಂಕ ಘೋಷಣೆ ಹಾಗೂ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕಾರ್ಯಕ್ರಮ ಮನೋರಂಜನಾ ಉದ್ದೇಶಕ್ಕೆ ಮಾತ್ರ ಸೀಮಿತವಾಗಿಸದೇ ವಿವಿಧ ಆಯಾಮಗಳಲ್ಲಿ ಅಭಿವೃದ್ಧಿಯ ಮುನ್ನೋಟ, ಜನರ ಆರೋಗ್ಯ ಹಾಗೂ ಜೀವನಮಟ್ಟ ಸುಧಾರಣೆಯ ದೂರದೃಷ್ಠಿತ್ವನ್ನು ಹೊಂದಿದೆ. ಈ ಭಾರಿ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿಯೂ ಗ್ರಾಮೋತ್ಸವಗಳನ್ನು ಆಯೋಜಿಸಲು ಯೋಜನೆ ಹಾಕಿಕೊಂಡಿದ್ದು ಅದರಂತೆ ಪ್ರತಿ ಗ್ರಾಮದಲ್ಲಿ ಕೃಷಿ ಮೇಳ, ಅರಣ್ಯ ಲೋಕ, ಕ್ರೀಡಾ ಮೇಳ, ಉದ್ಯೋಗ ಮೇಳ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಜೊಡಿಸಿಕೊಳ್ಳಲಾಗುತ್ತಿದೆ. ಬೈಂದೂರು ಉತ್ಸವ ಎಂಬುದು ಕಾರ್ಯಕ್ರಮಕ್ಕಷ್ಟೇ ಸೀಮಿತವಾಗಿರದೇ ಧೀರ್ಘಕಾದ ಪ್ರಗತಿಯ ಮುನ್ನೋಟವನ್ನು ಹೊಂದಿದೆ ಎಂದರು.
ಸಮೃದ್ಧ ಬೈಂದೂರು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎಸ್. ಸುರೇಶ್ ಶೆಟ್ಟಿ ಅವರು ಮಾತನಾಡಿ, ಬೈಂದೂರು ಉತ್ಸವವನ್ನು ಪ್ರಥಮ ಭಾರಿಗೆ ಆಯೋಜಿಸಿದಾಗ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಅದೇ ದೃಷ್ಟಿಕೋನದೊಂದಿಗೆ ಮತ್ತಷ್ಟು ಹೊಸ ಯೋಜನೆಗಳನ್ನು ರೂಪಿಸಿಕೊಂಡು ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.
ಬೈಂದೂರು ಉತ್ಸವ ಸಂಚಾಲಕ ಶ್ರೀಗಣೇಶ್ ಉಪ್ಪುಂದ ಕಾರ್ಯಕ್ರಮ ನಿರ್ವಹಿಸಿದರು. ನಾಗರಾಜ ನೈಕಂಬ್ಳಿ ಸಹಕರಿಸಿದರು.










