ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಸ್ಥಾಪನೆಯ 550ನೇ ವರ್ಷದ ಆಚರಣೆಯ ಅಂಗವಾಗಿ ಹಮ್ಮಿಕೊಂಡ 550 ಕೋಟಿ ಶ್ರೀ ರಾಮ ಜಪ ಯಜ್ಞ ಪೂರ್ಣಗೊಂಡಿದ್ದು, ಇದರ ಅಂಗವಾಗಿ ಶ್ರೀ ಮಠದ ಶ್ರೀರಾಮ ದಿಗ್ವಿಜಯ ರಥ ಯಾತ್ರೆ ದೇಶದ ಪ್ರಮುಖ ಕ್ಷೇತ್ರಗಳಲ್ಲಿ ಸಂಚರಿಸುತ್ತಿದೆ.
ಕುಂದಾಪುರಕ್ಕೆ ಶ್ರೀ ರಾಮ ದಿಗ್ವಿಜಯ ರಥ ಯಾತ್ರೆ ನವೆಂಬರ್ 14 ರಂದು ಸಿದ್ಧಾಪುರದಿಂದ ಆಗಮಿಸಲಿದೆ. ಈ ಸಂಬಂಧ ಸಂಜೆ 5 ಗಂಟೆಗೆ ಕುಂದಾಪುರ ಸರಕಾರಿ ಪ. ಪೂ ಕಾಲೇಜಿನಿಂದ ಪುರಸಭೆ ಮುಖ್ಯ ರಸ್ತೆಯಲ್ಲಿ ಶ್ರೀರಾಮ ದಿಗ್ವಿಜಯ ರಥವನ್ನು ಸ್ವಾಗತಿಸಿ, ಪುರಮೆರವಣಿಗೆಯಲ್ಲಿ ಕರೆ ತರಲಾಗುತ್ತದೆ. ಹೊಸ ಬಸ್ ಸ್ಟ್ಯಾಂಡ್ ಬಳಿ ತಿರುಗಿ ಮುಖ್ಯ ರಸ್ತೆಯಲ್ಲಿ ಶ್ರೀ ರಾಮ ಜಪ ಕೇಂದ್ರ ಶ್ರೀ ವಿಠಲ ದೇವಸ್ಥಾನಕ್ಕೆ ಶ್ರೀ ರಾಮ ದಿಗ್ವಿಜಯ ರಥ ಬರಲಿದೆ.
ಹಿಮಾಲಯದ ಬದರಿಕಾಶ್ರಮದಿಂದ ಪ್ರಾರಂಭಗೊಂಡ ಶ್ರೀ ರಾಮ ದಿಗ್ವಿಜಯ ರಥ ಯಾತ್ರೆಗೆ ಸಮಾಜ ಬಾಂಧವರಿಂದ ಎಲ್ಲಾ ಕಡೆ ಸಂಭ್ರಮದ ಸ್ವಾಗತ ದೊರಕಿದ್ದು, ಸಾಂಪ್ರದಾಯಿಕ ಉಡುಗೆ, ಭಜನೆಯೊಂದಿಗೆ ರಥಾರೂಢ ಮಾರುತಿ ಲಕ್ಷ್ಮಣ ಸಹಿತ ಶ್ರೀ ಸೀತಾಪತಿ ರಾಮಚಂದ್ರರ ಪೂಜೆ ನಡೆಯುತ್ತಿದೆ. ದಿನಾಂಕ 14 ರಂದು ಬೆಳಿಗ್ಗೆ ಬ್ರಹ್ಮಾವರದಿಂದ ಬಸ್ರೂರಿಗೆ ತೆರಳಿ ಅಲ್ಲಿಂದ ಸಿದ್ಧಾಪುರಕ್ಕೆ ತೆರಳಲಿದೆ. ಆನಂತರ ಸಂಜೆ ಕುಂದಾಪುರಕ್ಕೆ ಆಗಮಿಸಿ ನಂತರ ಕುಂದಾಪುರದಿಂದ ಗಂಗೊಳ್ಳಿಗೆ ತೆರಳಲಿದೆ.
ಸಮಾಜ ಬಾಂಧವರು ಈ ಪುರಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕೆಂದು ಶ್ರೀ ವಿಠಲ ದೇವಸ್ಥಾನ ಹಾಗೂ ಸಂಘಟಕರ ವತಿಯಿಂದ ವಿನಂತಿಸಲಾಗಿದೆ.










