ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕೋಟತಟ್ಟು ವ್ಯಾಪ್ತಿಯಲ್ಲಿ ಬಿ.ಎಲ್ ಒಗಳ ಕೊರತೆ ಎದುರಿಸಿತ್ತಿದ್ದೇವೆ, ಕೋಟ ಪಶು ಆಸ್ಪತ್ರೆಯಲ್ಲಿ ವೈದ್ಯರ ಹಾಗೂ ಸಿಬ್ಬಂದಿಗಳ ಕೊರತೆ ಇದ್ದು ಈ ಬಗ್ಗೆ ಗ್ರಾಮಸಭೆ ನಿರ್ಣಯ ಕೈಗೊಂಡು ಸರಕಾರದ ಕದ ತಟ್ಟಬೇಕು ಎಂದು ರತ್ನಾಕರ ಪೂಜಾರಿ ಹೇಳಿದರು.
ಅವರು ಕೋಟತಟ್ಟುವಿನ ಹಂದಟ್ಟು ಗೆಳೆಯರ ಬಳಗ ಸಭಾಂಗಣದಲ್ಲಿ ನಡೆದ ಕೋಟತಟ್ಟು ಗ್ರಾಮದ ಪ್ರಥಮ ಗ್ರಾಮಸಭೆಯಲ್ಲಿ ಸಾರ್ವಜನಿಕರ ಪರವಾಗಿ ಮಾತನಾಡಿದರು. ಈ ಬಗ್ಗೆ ಪಂಚಾಯತ್ ಬೋರ್ಡ ನಿರ್ಣಯ ಕೈಗೊಂಡು ಸಂಬಂಧಿಸಿ ಇಲಾಖೆಗೆ ಪತ್ರ ಬರೆಯಲಾಗುವುದು ಎಂದು ಪಿ.ಡಿ.ಒ ಸಭೆಗೆ ತಿಳಿಸಿದರು.

ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ಈ ಬಗ್ಗೆ ಕ್ರಮ ಜರಗಿಸಿ ಎಂದು ಸಭೆಯಲ್ಲಿ ಆಗ್ರಹ ಕೇಳಿಬಂತು. ಇದಕ್ಕೆ ಉತ್ತರಿಸಿದ ನೋಡೆಲ್ ಅಧಿಕಾರಿ ಡಾ. ಸೂರಜ್ ಕುಮಾರ್ ಬೀದಿ ನಾಯಿಗಳ ವಿರುದ್ಧ ಸುಪ್ರೀಂ ಕೋರ್ಟ್ ದೇಶದ ಎಲ್ಲಾ ರಾಜ್ಯಗಳಿಗೆ ಸುತ್ತೋಲೆ ರವಾನಿಸಿದೆ ಸರಕಾರ ರೂಪಿಸಿದ ಕಾನೂನಿನ ಅನುಗುಣವಾಗಿ ಕ್ರಮ ಕೈಗೊಳ್ಳಲು ಸಾಧ್ಯ ಅಷ್ಟರವರೆಗೆ ಇಲಾಖೆ ನಿರ್ದಿಷ್ಟ ಕ್ರಮಕ್ಕೆ ಅಸಾಧ್ಯ ಎಂದರು.
ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆ ಕ್ರಮದ ಕುರಿತು ಸ್ಥಳೀಯಾಡಳಿತ ಹಾಗೂ ಸಂಬಂಧಿಸಿದ ಏಜೆನ್ಸಿ ಮೂಲಕ ಯೋಜನೆ ರೂಪಿಸಲಾಗುವುದು ಎಂದು ಡಾ. ಸೂರಜ್ ಕುಮಾರ್ ತಿಳಿಸಿದರು.
ಕೋಟತಟ್ಟು ಮಾದರಿ ಗ್ರಾಮಸಭೆ ಅಧ್ಯಕ್ಷರ ಹೇಳಿಕೆ:
ಪ್ರಥಮ ಹಂತದ ಗ್ರಾಮಸಭೆಯ ಅಂಗವಾಗಿ ಕೋಟತಟ್ಟು ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಮಾತನಾಡಿ ಒಂದು ಗ್ರಾಮಸಭೆ ಸುಸೂತ್ರವಾಗಿ ಹೇಗೆ ನಡೆಸಲು ಸಾಧ್ಯ ಎಂಬುವುದನ್ನು ಕೋಟತಟ್ಟು ಜನತೆ ತೊರಿಸಿಕೊಟ್ಟಿದ್ದಾರೆ. ಗ್ರಾಮದ ಉನ್ನತಿಗೆ ಪಂಚಾಯತ್ ವ್ಯಾಪ್ತಿಯ ನಿವಾಸಿಗಳ ಸಹಕಾರ ಅಷ್ಟೆ ಬಹುಮುಖ್ಯವಾದದ್ದು ಈ ನಿಟ್ಟಿನಲ್ಲಿ ನಿಮ್ಮ ಸಲಹೆ ಸೂಚನೆಗಳನ್ನು ಕರಾರುವಾಕ್ಕಾಗಿ ಅನುಷ್ಠಾನಕ್ಕೆ ತರಲು ಪ್ರಯತ್ನಿಸುವುದಾಗಿ ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಕೋಟ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಾದ ಡಾ. ಮೊಹಮ್ಮದ್ ಇಲ್ಯಾಸ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕಾಧಿಕಾರಿ ರಮ್ಯ ಕುಂದರ್,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಲಕ್ಷ್ಮೀ ಮತ್ತಿತರ ಇಲಾಖೆಗಳಿಂದ ಮಾಹಿತಿ ನೀಡಲಾಯಿತು.
ಪಂಚಾಯತ್ ಸಿಬ್ಬಂದಿಗಳಾದ ಶಕೀಲ ಎನ್. ಪೂಜಾರಿ, ನವೀನ್ ಪೂಜಾರಿ ವರದಿ ಮಂಡಿಸಿದರು. ಪಂಚಾಯತ್ ಉಪಾಧ್ಯಕ್ಷೆ ಸರಸ್ವತಿ ಪೂಜಾರಿ, ಪಂಚಾಯತ್ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಿಡಿಒ ರವೀಂದ್ರ ರಾವ್ ನಿರ್ವಹಿಸಿದರು. ಕಾರ್ಯದರ್ಶಿ ಸುಮತಿ ಅಂಚನ್ ವಂದಿಸಿದರು.















