ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಲೇಖಕಿ ಸಾರಿಕಾ ಅಶೋಕ್ ಅವರ ಕವನ ಸಂಕಲನ “ಲಹರಿ” ಬಿಡುಗಡೆ ಸಮಾರಂಭವು ಬಸ್ರೂರಿನ ನಿವೇದಿತಾ ಪ್ರೌಢ ಶಾಲೆಯ ವಿಶಾಲಾಕ್ಷಿ ಪೂಂಜಾ ಸಭಾಭವನದಲ್ಲಿ ಇತ್ತೀಜಿಗೆ ಜರುಗಿತು.

ಕರ್ನಾಟಕ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿರುವ, ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನರೇಂದ್ರ ಕುಮಾರ್ ಕೋಟ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಸಾರಿಕಾ ಅಶೋಕ್ ಅವರ ಕವನಗಳ ಆಶಯ ಜೀವನ ಜಂಜಡಗಳ ಸಾಮಾಜಿಕ ಕಾಳಜಿಗಳು ಅಪೂರ್ವದದ್ದು ಎಂದರು.
ಕುಂದಪ್ರಭ ಪತ್ರಿಕೆಯ ಸಂಪಾದಕರಾಗಿರುವ ಯುಎಸ್ ಶೆಣೈ ಅವರು ಪುಸ್ತಕ ಬಿಡುಗಡೆಗೊಳಿಸಿ, ಕವಯಿತ್ರಿ ಕವನ ರಚನೆಯಲ್ಲಿ ತನ್ನದೇ ಆದ ಛಾಪು ಮೂಡಿಸಬಲ್ಲರು. ಸಾರಿಕಾ ಅಶೋಕ್ ಅವರ ಕುಂದದ ಪ್ರತಿಭೆ ಎಂದು ಶುಭ ಹಾರೈಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುರುಕುಲ ಪಬ್ಲಿಕ್ ಸ್ಕೂಲ್‌ನ ಜಂಟಿ ಆಡಳಿತ ನಿರ್ದೇಶಕರಾದ ಅನುಪಮಾ ಎಸ್. ಶೆಟ್ಟಿ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಖ್ಯಾತ ಸಾಹಿತಿ, ವಾಸ್ತು ತಜ್ಞರಾದ ಬಸವರಾಜ್ ಶೆಟ್ಟಿಗಾರ್, ಯಕ್ಷಗಾನ ಪ್ರಸಂಗ ಕರ್ತರಾದ ಮಹಾಬಲ ಹೇರಿಕುದ್ರು, ಬಸ್ರೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ದಿನಕರ್ ಶೆಟ್ಟಿ ಬೇಳೂರು, ನಿವೇದಿತಾ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ದಿನಕರ್ ಆರ್. ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಿಕ್ಷಕ ವೃಂದವನ್ನು ಗೌರವಿಸುವ ಗುರುವಂದನ ಕಾರ್ಯಕ್ರಮ ಜರುಗಿತು. ಹಿಂದೂ ಮಾದರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಮಂಜುನಾಥ ಕೆ.ಎಸ್. ಅವರು ಸ್ವಾಗತಿಸಿ, ನರಸಿಂಹ ಪೂಜಾರಿ ಅವರು ಕಾರ್ಯಕ್ರಮವನ್ನು ನಿರೂಪಿಸಿ, ಅಶೋಕ್ ಕೆರೆಕಟ್ಟೆ ವಂದಿಸಿದರು.















