ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ಕ್ಷೇತ್ರವು ಬಹುತೇಕ ಅರಣ್ಯ ಪ್ರದೇಶಗಳನ್ನು ಹೊಂದಿದ್ದು ಸಾಮಾನ್ಯ ಅರಣ್ಯ ಪ್ರದೇಶ ಸೇರಿದಂತೆ ಮೀಸಲು ಅರಣ್ಯ, ಸಾಮಾಜಿಕ ಅರಣ್ಯ ಹಾಗೂ ಕೆಸಿಡಿಸಿ ವ್ಯಾಪ್ತಿ ದೊಡ್ಡದಿರುವ ಕಾರಣ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಯೋಜನೆಗಳು ಜಾರಿಯಾದ ಸಂದರ್ಭದಲ್ಲಿ ಅರಣ್ಯ ಇಲಾಖೆಯಿಂದ ಅಗತ್ಯ ನಿರಾಕ್ಷೇಪಣೆ ಪಡೆಯಲು ಅವಕಾಶವಿದ್ದರೂ, ಅರಣ್ಯ ಕಾನೂನಿನ ಅರ್ಥೈಸುವಿಕೆ ಹಾಗೂ ಪರಿವೆಷಿ ತಂತ್ರಾಂಶಗಳ ಬಳಕೆ ಬಗ್ಗೆ ಅನುಷ್ಠಾನ ಇಲಾಖೆಗಳಿಗೆ ಮಾಹಿತಿ ಕೊರತೆಯ ಕಾರಣದಿಂದ ಯೋಜನೆಗಳು ನೆನೆಗುದಿಗೆ ಬಿದ್ದು ರದ್ದುಗೊಳ್ಳುವ ಸಂದರ್ಭವಿರುವುದರಿಂದ ಅದನ್ನು ತಡೆಗಟ್ಟಲು ಮುಂದಿನ ದಿನಗಳಲ್ಲಿ ಅರಣ್ಯ ಅದಾಲತ್ ಮಾದರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಹೇಳಿದರು.
ಅವರು ತಾಲೂಕು ಆಡಳಿತ ಕಚೇರಿ ಪ್ರಜಾ ಸೌಧದಲ್ಲಿ ಕುಂದಾಪುರ ಉಪ ವಿಭಾಗಾಧಿಕಾರಿಯವರ ಸಮಕ್ಷಮ ಬೈಂದೂರು ಕ್ಷೇತ್ರದ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅರಣ್ಯ, ಕಂದಾಯ ಹಾಗೂ ಇತರೆ ಇಲಾಖೆಗಳ ಜೊತೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಕೊಲ್ಲೂರು ಗ್ರಾಮದ ಸ. ನಂ 121 ಹಾಗೂ ಸ. ನಂ 56 ರಲ್ಲಿನ ಸಮಸ್ಯೆ ನಿವಾರಣೆಗೆ ಅರಣ್ಯ ಇಲಾಖಾ ಅಧಿಕಾರಿಗಳಿಗೆ ಸೂಚನೆ:
ಕೊಲ್ಲೂರು ಗ್ರಾಮದ ಸರ್ವೇ ನಂಬ್ರ 121 ರಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆಯ ಹೆಸರಿನಲ್ಲಿ ಲಭ್ಯ ಜಮೀನಿನ ಬಗ್ಗೆ ಇಲಾಖೆಗಳ ನಡುವೆಯೇ ಗೊಂದಲಗಳಿರುವ ಕಾರಣ ಮತ್ತು ಆ ಸರ್ವೇ ನಂಬ್ರ ಗಳಲ್ಲಿ ಅಕ್ರಮ ಸಕ್ರಮ ಹಾಗೂ 94 ಸಿ ಅರ್ಜಿಗಳಿಗೆ ಹಕ್ಕು ಪತ್ರ ನೀಡಲು ಈ ಹಿಂದೆ ಸಭೆ ನಡೆಸಿ ಸೂಚನೆ ನೀಡಿದ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯ ವರ್ಕಿಂಗ್ ಪ್ಲಾನ್ ವಿಭಾಗದಿಂದ ಸರ್ವೇ ಕಾರ್ಯ ಈಗಾಗಲೇ ಮುಗಿದಿದ್ದು, ವರದಿ ಬಂದ ನಂತರ ಕ್ರಮ ವಹಿಸುವುದು ಹಾಗೂ ಸ. ನಂ 56 ರಲ್ಲಿನ ಸಮಸ್ಯೆಗಳಿಗೆ ಮತ್ತೊಮ್ಮೆ ಸರ್ವೇ ನಡೆಸಿ ವರದಿ ಪಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಡ್ಕಲ್ – ಮುದೂರು ಪ್ಲಾಟಿಂಗ್ ನಿವಾರಣೆಗೆ ಮುಂದಿನ ಹಂತದ ಕ್ರಮಕ್ಕೆ ನಿರ್ದೇಶನ:
ಜಡ್ಕಲ್ ಮುದೂರು ಗ್ರಾಮಗಳಲ್ಲಿ ಹಲವು ದಶಕಗಳಿಂದ ಇರುವ ಪ್ಲಾಟಿಂಗ್ ಸಮಸ್ಯೆ ನಿವಾರಣೆಗೆ ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಗಳ ಸಮಕ್ಷಮ ಒಂದು ಸುತ್ತಿನ ಸಭೆ ನಡೆಸಲಾಗಿದ್ದು ಅದರಂತೆ ಸದರಿ ಸಮಸ್ಯೆಯನ್ನು ಬಗೆ ಹರಿಸಲು ವಿವಿಧ ಕಾರ್ಯತಂತ್ರಗಳನ್ನು ರೂಪಿಸಿ ಉಪ ವಿಭಾಗಾಧಿಕಾರಿ ಭೂ ನ್ಯಾಯ ಮಂಡಳಿಯ ಮುಂದೆ ಹಾಗೂ ಸರ್ವೇ ಮುಖಾಂತರ ಪರಿಹಾರ ಕಂಡುಕೊಳ್ಳಲು ನಿರ್ದೇಶನ ನೀಡಿದರು.
766 ಸಿ ಹೆದ್ದಾರಿ ಕಾಮಗಾರಿ ಯೋಜನಾ ಅನುಷ್ಠಾನ ತ್ವರಿತಗೊಳಿಸಲು ಅಧಿಕಾರಿಗಳಿಗೆ ತಾಕಿತು:
ರಾಷ್ಟೀಯ ಹೆದ್ದಾರಿ 766ಸಿ ಭೂ ಸ್ವಾದೀನ ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿದ್ದು ಹಾಗೂ 419 ಜನರಿಗೆ ಭೂ ಪರಿಹಾರ ಒದಗಿಸಲು ಕ್ರಮವಾಗಿದ್ದು ಬಾಕಿ ಇರುವ 88 ಪ್ರಕರಣಗಳನ್ನು ಶೀಘ್ರವೇ ಇತ್ಯರ್ಥ ಪಡಿಸಲು ಎ.ಸಿ ಯವರಿಗೆ ಹಾಗೂ ರಸ್ತೆ ಬದಿ ಮರಗಳ ತೆರವಿಗೆ ಅನುಮತಿ ಕಾರಣಕ್ಕೆ ಕಡತ ತಯಾರು ಮಾಡಿಟ್ಟು ಸುಮ್ಮನೇ ಕುಳಿತುಕೊಳ್ಳುವುದು ಹಾಗೂ ವಿಳಂಬ ಮಾಡುವುದು ಸರಿಯಲ್ಲ. ಹಾಗಾಗಿ ಸಂಬಂಧ ಪಟ್ಟ ಇಲಾಖೆಗಳು ಈ ಕುರಿತು ತುರ್ತು ಕಾರ್ಯ ಪ್ರವೃತ್ತರಾಗಬೇಕು ಎಂದು ಅರಣ್ಯ ಹಾಗೂ ರಾಷ್ಟೀಯ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ತಾಕಿತು ಮಾಡಿದರು.
ಸಭೆಯಲ್ಲಿ ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ, ಭೂದಾಖಲೆಗಳ ಉಪ ನಿರ್ದೇಶಕರಾದ ರವೀಂದ್ರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಾಮಾಜಿಕ ಅರಣ್ಯ ಹಾಗೂ ಕೆ.ಸಿ.ಡಿ. ಸಿ ವಿಭಾಗೀಯ ವ್ಯವಸ್ಥಾಪಕರು, ಅರಣ್ಯ ಇಲಾಖೆಯ ಎ.ಸಿ.ಎಫ್ ಗಳು, ವಲಯ ಅರಣ್ಯಾಧಿಕಾರಿಗಳು, ತಾಲೂಕು ತಹಸೀಲ್ದಾರ್, ತಾಲೂಕು ಆರೋಗ್ಯ ಅಧಿಕಾರಿಗಳು ಹಾಗೂ ಇತರೆ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.















