ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನ.28ರಂದು ನಡೆಯುವ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ಹಟ್ಟಿಯಂಗಡಿ ಸಿದ್ದಿ ವಿನಾಯಕ ವಸತಿ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ರಿಷಿಕಾ ದೇವಾಡಿಗ ಬೈಂದೂರು ಆಯ್ಕೆಯಾಗಿದ್ದಾರೆ ಎಂದು ಕೋಟ ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷ ಉಪೇಂದ್ರ ಸೋಮಯಾಜಿ ತಿಳಿಸಿದ್ದಾರೆ.
ಸಾಹಿತ್ಯ ರಚನೆಯಲ್ಲೂ ತೊಡಗಿಸಿಕೊಂಡಿರುವ ರಿಷಿಕಾ ದೇವಾಡಿಗ ಅವರ ‘ಮೊದಲ ಹೆಜ್ಜೆ’ ಎಂಬ ಕಥಾ ಸಂಕಲನ ಪ್ರಕಟಗೊಂಡಿದೆ. ಕಳೆದ ವರ್ಷ ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರ ಪ್ರಶಸ್ತಿ ಪಡೆದಿದ್ದರು.
ಅವರು ಸಿದ್ದಿವಿನಾಯಕ ವಸತಿ ಶಾಲೆಯ ವೈಸ್ ಪ್ರಿನ್ಸಿಪಾಲ್ ರಾಮ ದೇವಾಡಿಗ ಮತ್ತು ಶಿಕ್ಷಕಿ ರೂಪಾ ದಂಪತಿ ಪುತ್ರಿ.
ಸಮ್ಮೇಳನದ ಉದ್ಘಾಟಕರಾಗಿ ಧನ್ಯಶ್ರೀ ಜೋಗಿ ಕೋಟ, ಕವನಗೋಷ್ಠಿಯ ಅಧ್ಯಕ್ಷರಾಗಿ ಸೃಜನ್ ಬೆಂಗಳೂರು ಹಾಗೂ ಕಥಾಗೋಷ್ಠಿಯ ಅಧ್ಯಕ್ಷರಾಗಿ ಸಿದ್ದೇಶ್ ಮೈಸೂರು ಆಯ್ಕೆಯಾಗಿದ್ದಾರೆ. ಇದರ ಜತೆಯಲ್ಲಿ ಅಂದು ನಡೆಯುವ ಎಲ್ಲ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳೇ ನಡೆಸಿಕೊಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋಟ ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆ, ವಿದ್ಯಾಚೇತನ ಪ್ರಕಾಶನ ಸಿಂದಗಿ-ವಿಜಯಪುರ ಹಾಗೂ ಹಟ್ಟಿಯಂಗಡಿ ಸಿದ್ದಿ ವಿನಾಯಕ ವಸತಿ ಶಾಲೆ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.















