ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಿದ್ದಾಪುರ ಮೆಸ್ಕಾಂ ಶಾಖೆಯ ಪವರ್ ಮ್ಯಾನ್ ಸಚಿನ್ ಕಲ್ಲಪ್ಪ ಸಂಕ್ರಟ್ಟಿ (28) ಅವರು ನ. 22ರ ರಾತ್ರಿ ಸ್ನೇಹಿತನನ್ನು ಕುಂದಾಪುರಕ್ಕೆ ಬಿಡಲು ಎರಡು ಬೈಕ್‌ಗಳಲ್ಲಿ ತೆರಳುತ್ತಿದ್ದ ವೇಳೆ ಶಂಕರನಾರಾಯಣ ಗ್ರಾಮದ ಕಲ್ಲದ್ದೆ ಬಳಿ ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ಸಂಭವಿಸಿದೆ.
ಸಿದ್ದಾಪುರ ಮೆಸ್ಕಾಂ ಶಾಖೆಯ ಸಿದ್ದಾಪುರ ಕಡ್ರಿ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಚಿನ್ ನ. 22ರಂದು ಕರ್ತವ್ಯ ಮುಗಿಸಿ ಸ್ನೇಹಿತರೊಂದಿಗೆ ಕಾರ್ಯಕ್ರಮಕ್ಕೆ ತೆರಳಿದ ಬಳಿಕ ಬೆಳಗಾವಿಗೆ ತೆರಳುವ ಸ್ನೇಹಿತ ಬಸವ ಕಿರಣ ಅವರನ್ನು ಬಿಡಲು ಕುಂದಾಪುರಕ್ಕೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಸಚಿನ್ ಅವರು ಒಬ್ಬರೇ ತಮ್ಮ ಬೈಕಿನಲ್ಲಿ ಪ್ರಯಾಣಿಸುತ್ತಿದ್ದರು. ಸ್ನೇಹಿತ ಚಿಂತಾಮಣಿಯ ರಾಹುಲ್ ಆರ್. ಮಾದರ್ ಮತ್ತು ಬಸವ ಕಿರಣ ಇನ್ನೊಂದು ಬೈಕಿನಲ್ಲಿ ತೆರಳುತ್ತಿದ್ದರು. ಅಪಘಾತದಲ್ಲಿ ತಲೆಗೆ ತೀವ್ರವಾಗಿ ಗಾಯವಾಗಿದ್ದ ಅವರನ್ನು 108 ವಾಹನದ ಮೂಲಕ ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಸಿದ್ದಾಪುರ ಮೆಸ್ಕಾಂ ಶಾಖೆಗೆ 2022ರಲ್ಲಿ ಕರ್ತವ್ಯಕ್ಕೆ ಸೇರಿದ್ದ ಅವರು ಮೂರು ವರ್ಷ ತರಬೇತಿ ಅವಧಿ ಮುಗಿಸಿ ಕಳೆದ 3 ತಿಂಗಳ ಹಿಂದೆ ಖಾಯಂಗೊಂಡಿದ್ದರು.
ಸಚಿನ್ ಕಲ್ಲಪ್ಪ ಸಂಕ್ರಟ್ಟಿ ಅವರು ಬೆಳಗಾವಿ ಜಿಲ್ಲೆಯ ಅಥನಿ ತಾಲೂಕಿನ ಬಾಳೆಗೇರೆ ಕೃಷಿ ಕುಟುಂಬದಿಂದ ಬಂದವರಾಗಿದ್ದಾರೆ. ತಂದೆ-ತಾಯಿಗೆ ನಾಲ್ಕು ಮಂದಿ ಮಕ್ಕಳಲ್ಲಿ ಅವರು ಕೊನೆಯವರು. ಒಬ್ಬರೇ ಮಗನಾಗಿದ್ದು, ಮೂವರು ಮಂದಿ ಸಹೋದರಿಯರಿದ್ದಾರೆ. ಸಹೋದರಿಯರಿಗೆ ಮದುವೆಯಾಗಿದ್ದು ಸಚಿನ್ ಅವಿವಾಹಿತರಾಗಿದ್ದರು.
ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಮೃತ ಶರೀರವನ್ನು ಹುಟ್ಟೂರಿಗೆ ಕಳುಹಿಸಲಾಗಿದೆ. ಆಸ್ಪತ್ರೆಗೆ ಮೆಸ್ಕಾಂ ಇಲಾಖೆಯ ಇಇ ಯಶವಂತ್ ಕುಂದಾಪುರ ವಿಭಾಗ, ಎಇಇ ಗುರುಪ್ರಸಾದ್ ಭಟ್ ಶಂಕರನಾರಾಯಣ ವಿಭಾಗ, ಜೆಇ ಕೃಷ್ಣ ಅವರು ಭೇಟಿ ನೀಡಿದರು.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















