ಕುಂದಾಪುರ: ಬೈಂದೂರು ವಲಯದ ಹಕ್ಲಾಡಿ ಯಳೂರು ತೊಪ್ಲುವಿನ ಪ್ರಾಥಮಿಕ ಶಾಲೆಗೆ 50 ವರ್ಷಗಳ ಸುವರ್ಣ ಸಂಭ್ರಮ. 1961ನೇ ಇಸವಿಯಲ್ಲಿ ಆರಂಭವಾಗಿ ಸಾವಿರಾರು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಶಾಲೆ ಸಾರ್ಥಕ ೫೦ ವರ್ಷಗಳನ್ನು ಪೂರೈಸಿ ಡಿ.೧೭ ರಂದು ಸುವರ್ಣ ಸಂಭ್ರಮವನ್ನು ಆರಿಸಿಕೊಳ್ಳುತ್ತಿದೆ.
ಶಾಲೆ ಹಿನ್ನಲೆ: 1961ರಲ್ಲಿ ಪ್ರಾರಂಭವಾದ ಯಳೂರು ತೊಪ್ಲುವಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪರಿಸರದ ಸಾವಿರಾರು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅವಕಾಶ ನೀಡಿ ಅವರನ್ನು ಸುಮಾಜದ ಉನ್ನತ ಹುದ್ದೆಗಳನ್ನು ಅಲಂಕರಿಸುವಂತೆ ಪ್ರೇರಣೆ ನೀಡಿದ ವಿದ್ಯಾದೇಗುಲವಾಗಿದೆ. ಇಲ್ಲಿ ಶಿಕ್ಷಣ ಪಡೆದವರು ವಕೀಲರಾಗಿ, ಇಂಜಿನಿಯರ್‌ಗಳಾಗಿ, ವೈದ್ಯರುಗಳಾಗಿ ಉದ್ದಿಮೆದಾರರಾಗಿ ಕೀರ್ತಿಗಳಿದ್ದಾರೆ. ಸಮಾಜದಲ್ಲಿ ಉನ್ನತ ಸ್ಥಾನಮಾನಗಳನ್ನು ಹೊಂದಿದ್ದಾರೆ.
5 ಕೊಠಡಿಗಳು, ಶೌಚಾಲಯ, ಅಕ್ಷರ ದಾಸೋಹ ಕೊಠಡಿ, ಶಾಲಾ ಕೈತೋಟ, ವಾಚನಾಲಯ, ವಿದ್ಯಾರ್ಥಿ ಸಹಕಾರ ಸಂಘ, ಬಾವಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಹೊಂದಿರುವ ಶಾಲೆಗೆ ಸಹೃದಯರ ಸಹಾಯ ಹಸ್ತವೂ ಬೇಕಿದೆ. ಇಲ್ಲಿ ಪ್ರಮುಖವಾಗಿ ಆಟದ ವೈದಾನ, ಆವರಣಗೋಡೆ, ಕಂಪ್ಯೂಟರ್, ವಿಜ್ಞಾನ ಉಪಕರಣಗಳು, ಶಾಲಾ ಅಂಗಳಕ್ಕೆ ಇಂಟರ್‌ಲಾಕ್ ಅಳವಡಿಕೆಯ ಅಗತ್ಯತೆ ಕಂಡು ಬರುತ್ತಿದೆ.
ಎಸ್. ಶಶಿಧರ ಶೆಟ್ಟಿ ಸಾಲಗದ್ದೆ, ರಾಜೀವ ಉಪ್ಪುಂದ ಶಿಕ್ಷಕರಾಗಿ, ಕುಮಾರಿ ವಿನೋದ ಗೌರವ ಶಿಕ್ಷಕರಾಗಿ ಇದೀಗ ಸೇವೆಯಲ್ಲಿದ್ದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಮಕ್ಕಳ ಸರ್ವಾಂಗೀಣ ವಿಕಾಸ, ಶಾಲೆಯ ಬೆಳವಣಿಗೆಯ ಕನಸನ್ನು ಹೊತ್ತಿದ್ದಾರೆ. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಶ್ರೀಮತಿ ಸಿಂಗಾರಿ ಪೂಜಾರಿ, ಉಪಧ್ಯಕ್ಷೆ ಶ್ರೀಮತಿ ಸಾಕು ಮೊಗವೀರ ಹಾಗೂ 16 ಮಂದಿ ಸದಸ್ಯರು ಶಾಲೆಯ ಏಳಿಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಇದೀಗ ಸುವರ್ಣ ಸಮಿತಿ ಅಧ್ಯಕ್ಷರಾಗಿ ಸತೀಶ ಕುಮಾರ ಶೆಟ್ಟಿ ಯಳೂರು ಶ್ರಮಸುತ್ತಿದ್ದಾರೆ.
ಡಿ.17: ಸುವರ್ಣ ಮಹೋತ್ಸವ
ಬೆಳಿಗ್ಗೆ 9:30ಕ್ಕೆ ಸುವರ್ಣ ಮಹೋತ್ಸವದ ಉದ್ಘಾಟನೆಯನ್ನು ನಿವೃತ್ತ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ ಉದ್ಘಾಟಿಸಲಿದ್ದು ಬೈಂದೂರು ವಲಯದ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಊರಿನ ಪ್ರಮುಖರು, ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸುವರ್ಣ ಮಹೋತ್ಸವದ ಅಂಗವಾಗಿ ಕ್ಲಸ್ಟರ್ ಮಟ್ಟದ 7 ಹಿರಿಯ ಪ್ರಾಥಮಿಕ ಶಾಲೆ ಮತ್ತು 3 ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ತರಗತಿ ಮಟ್ಟದಲ್ಲಿ ಓದುವುದು, ಬರೆಯುವುದು, ಅಭಿವ್ಯಕ್ತಿ, ಪ್ರಬಂಧ ಮೊದಲಾದ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ಮಧ್ಯಾಹ್ನ ಮನರಂಜನಾ ಕಾರ್ಯಕ್ರಮವಾಗಿ ಜಾದೂ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
















