ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ತೆಕ್ಕಟ್ಟೆಯ ವಿಶ್ವ ವಿನಾಯಕ ಸಿ.ಬಿ.ಎಸ್.ಇ ಸ್ಕೂಲ್‌ನಲ್ಲಿ ಮಕ್ಕಳಿಗೆ ಏರ್ಪಡಿಸಿದ ಸಾಂಸ್ಕ್ರತಿಕ ಮತ್ತು ಸಾಹಿತ್ಯಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಏರ್ಪಡಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಂಭಾಶಿ ಬ್ಯಾಂಕ್ ಬರೋಡ ಮುಖ್ಯ ಪ್ರಬಂಧಕರಾದ ಬೇಳೂರು ಕರುಣಾಕರ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಕ್ಕಳಿಗೆ ಬಹುಮಾನ ವಿತರಣೆಯನ್ನು ಮಾಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಶಾಲೆಯ ಉತೃಷ್ಠ ಸಾಧನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಗ್ರಾಮೀಣ ಪ್ರದೇಶದಲ್ಲಿ ಇರುವ ಇಂತಹ ಶಾಲೆಗಳಲ್ಲಿ ರಾಷ್ಟ್ರ, ಅಂತ ರಾಷ್ಟ್ರೀಯ ಮಟ್ಟದ ಪ್ರತಿಭೆಗಳು ಹುಟ್ಟಿಕೊಳ್ಳುತ್ತವೆ. ಇಂತಹ ಮಕ್ಕಳನ್ನು ಪ್ರೋತ್ಸಾಹಿಸಿ ಮುಂದಿನ ಸಾಧನೆಗೆ ಶಾಲೆ ಹಾಗೂ ಪೋಷಕರು ಸಹಕಾರಿಯಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮ್ಯಾನೇಜಿಂಗ್ ಡೈರೆಕ್ಟರ್ ಎಮ್. ಪ್ರಭಾಕರ ಶೆಟ್ಟಿ ಅವರು ಮಾತನಾಡಿ, ಬಹುಮಾನ ಎನ್ನುವುದು ಮುಂದಿನ ಸಾಧನೆಗೆ ದಾರಿಯಾಗಬೇಕು ಹಾಗೂ ವಿದ್ಯಾರ್ಥಿಗಳು ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಚಿತ್ರ ಕಲಾ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ವಿವಿಧ ಚಿತ್ರಕಲಾ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದು ಸಾಧನೆ ಮಾಡಿದ 8ನೇ ತರಗತಿ ವಿದ್ಯಾರ್ಥಿ ಯಕ್ಷತ್ ಶೆಟ್ಟಿ ಅವರನ್ನು ಫಲ ಪುಷ್ಪ ಹಾಗೂ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲ ನಿತಿನ್ ಡಿ.’ ಆಲ್ಮೇಡಾ, ಶಿಕ್ಷಕರು, ಪೋಷಕರು ಹಾಗೂ ಶಾಲಾ ಸಿಬ್ಬಂದಿ ಅವರು ಉಪಸ್ಥಿತರಿದ್ದರು. ಶಿಕ್ಷಕರಾದ ಸಂದಿಪ್ ಸ್ವಾಗತಿಸಿ, ಪ್ರೇಮ ರಾವ್ ನಿರೂಪಿಸಿ, ಅನುಷಾ ವಂದಿಸಿದರು.










