ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆಯ ತರಬೇತಿ ತರಗತಿಗಳ ಉದ್ಘಾಟನಾ ಸಮಾರಂಭ ಮತ್ತು 2024- 25ನೇ ಸಾಲಿನ ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆಯ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವು ಕಿರಿಮಂಜೇಶ್ವರದ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಜರುಗಿತು.
ಕಿರಿಮಂಜೇಶ್ವರ ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ಶೇಖರ್ ಖಾರ್ವಿ ಹಾಗೂ ನಾವುಂದ ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ನರಸಿಂಹ ದೇವಾಡಿಗ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಶಿಕ್ಷಣ ಸಂಯೋಜಕರಾದ ಯೋಗೇಶ್ ಕೆ. ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ “ಉತ್ತಮ ಯೋಜಿತ ಕಾರ್ಯಗಳು ಸದಾ ಯಶಸ್ಸನ್ನು ನೀಡುತ್ತವೆ ಎನ್ನುವುದಕ್ಕೆ ಹಿಂದಿನ ಸಾಲಿನ ಭರ್ಜರಿ ಫಲಿತಾಂಶವೇ ಸಾಕ್ಷಿ. ಜನತಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಗಣೇಶ ಮೊಗವೀರರ ಸರಕಾರಿ ಶಾಲೆಗಳ ವಿದ್ಯಾರ್ಥಿಗಳ ಶ್ರೇಯೋನ್ನತಿಗೆ ವಿಶೇಷ ಸಹಕಾರ ನೀಡಿದ್ದು, ನಮಗೆ ವರದಾನವಾಗಿದೆ” ಎಂದರು.
ಶೇಖರ ಖಾರ್ವಿ ಅವರು ತಮ್ಮ ಉದ್ಘಾಟನಾ ನುಡಿಗಳಲ್ಲಿ “ಎನ್ಎಂಎಂಎಸ್ ಪರೀಕ್ಷೆಯು ಸರ್ಕಾರಿ ಶಾಲೆಯ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಉತ್ತಮ ಅವಕಾಶ ವಾಗಿದೆ. ಸರ್ಕಾರದ ಕಾರ್ಯಕ್ರಮಗಳು ಯಶಸ್ವಿಗೊಳ್ಳಲು ಅಧಿಕಾರಿಗಳ ಬದ್ಧತೆ, ದಾನಿಗಳ ನೆರವು, ಜನತೆಯ ಸಹಕಾರ ಬಹಳ ಅಗತ್ಯವಾಗಿರುತ್ತದೆ. ಜನತಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಗಣೇಶ ಮೊಗವೀರರು ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಟ್ಟು ಉದಾರತೆ ಮೆರೆದಿದ್ದಾರೆ” ಎನ್ನುತ್ತಾ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೈಂದೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗೇಶ ನಾಯ್ಕ ಮಾತನಾಡಿ “ಉನ್ನತ ಗುರಿಯ ಕಾರಣದಿಂದಾಗಿ ವಿದ್ಯಾರ್ಥಿಗಳು ಉತ್ತಮ ಸಾಧನೆಗೈಯಲು ಕಾರಣವಾಗಿದೆ. ಹಾಗೆಯೇ ಈ ವರ್ಷ ಉತ್ತಮ ವಿದ್ಯಾರ್ಥಿಗಳು ನಮಗೆ ದೊರಕಿದ್ದು ಉತ್ತಮ ತರಬೇತಿಗಳ ಮೂಲಕ ವಿದ್ಯಾರ್ಥಿಗಳ ಕೌಶಲ್ಯವನ್ನು ವೃದ್ಧಿಸಲು ಪ್ರಯತ್ನಿಸಲಿದ್ದೇವೆ” ಎಂದರು.
ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ಕಾರ್ಯಕ್ರಮದ ಸಹಾಯಕ ನಿರ್ದೇಶಕರಾದ ಚಂದ್ರ ನಾಯಕ್ ಮಾತನಾಡಿ “ಉತ್ತಮ ನಾಯಕತ್ವ, ಸಂಘಟನೆ ಕಾರ್ಯನಿರ್ವಹಣೆ, ಪರಿಶ್ರಮ ಇದ್ದಲ್ಲಿ ದೇವರು ಕೂಡ ಸಹಾಯಕನಾಗಿ ನಿಲ್ಲುತ್ತಾನೆ ಎಂಬುದಕ್ಕೆ ಕಳೆದ ವರ್ಷದ ಫಲಿತಾಂಶವೇ ಸಾಕ್ಷಿಯಾಗಿದೆ. ಇದು ಬೇರೆ ಬೇರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮೆಟ್ಟಿಲಾಗುವುದರಲ್ಲಿ ಯಾವುದೇ ಸಂದೇಹವಿಲ್ಲ” ಎಂದರು.
ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಜನತಾ ಸಮೂಹ ಸಂಸ್ಥೆಗಳ ಮುಖ್ಯಸ್ಥರಾಗಿರುವ ಗಣೇಶ ಮೊಗವೀರರು” ನಮ್ಮ ತಾಲೂಕು ಪ್ರತಿಭಾನ್ವಿತರನ್ನು ಹೊಂದಿರುವ ತಾಲೂಕಾಗಿದೆ. ಈ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ, ಮಾರ್ಗದರ್ಶನ ಅವಶ್ಯಕವಾಗಿದೆ. ನಮ್ಮ ಜನತಾ ಸಂಸ್ಥೆ ಗ್ರಾಮೀಣ ಭಾಗದ ಪ್ರತಿಭೆಗಳ ಅನಾವರಣಕ್ಕೆ ಸದಾ ಸಿದ್ಧವಾಗಿರುತ್ತದೆ. ಈ ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಎಲ್ಲಾ ವಿದ್ಯಾರ್ಥಿಗಳಿಗೂ ವಿಶೇಷ ಆರ್ಥಿಕ ನೆರವನ್ನೂ ನೀಡಲಿದ್ದೇನೆ ಎಂದರು.
2024-25 ನೇ ಸಾಲಿನ ಎನ್ಎಂಎಂಎಸ್ ಪರೀಕ್ಷೆಯಲ್ಲಿ ವಿಶೇಷ ಸಾಧನೆಗೈದ 32 ಸಾಧಕ ವಿದ್ಯಾರ್ಥಿಗಳಿಗೆ ಜನತಾ ಸಮೂಹ ಸಂಸ್ಥೆಗಳ ವತಿಯಿಂದ ಸನ್ಮಾನ ಮಾಡಲಾಯಿತು.
ನಾವುಂದ ಗ್ರಾಮ ಪಂಚಾಯತ್ ನ ಅಧ್ಯಕ್ಷರಾಗಿರುವ ನರಸಿಂಹ ದೇವಾಡಿಗ, ಜಿಲ್ಲಾ ನೋಡಲ್ ಅಧಿಕಾರಿಗಳಾದ ಕಿಶೋರ್ ಕುಮಾರ್, ಪ್ರಾಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸದಾನಂದ ಶೆಟ್ಟಿ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಗಣೇಶ್ ಪೂಜಾರಿ, ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿಗಳು, ತರಬೇತುದಾರರು, ಜನತಾ ಸಮೂಹ ಸಂಸ್ಥೆಗಳ ಬೋಧಕ- ಬೋಧಕೇತರ ವೃಂದದವರು ಹಾಗೂ ಪೋಷಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ ಸ್ವಾಗತಿಸಿ, ಬೈಂದೂರಿನ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಂಜುನಾಥ ದೇವಾಡಿಗ ನಿರೂಪಿಸಿ, ಸಂಯೋಜಕರಾಗಿರುವ ಸುಬ್ರಹ್ಮಣ್ಯ ಮರಾಟಿ ವಂದಿಸಿದರು.















