ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಬೈಂದೂರು ಉತ್ಸವ ಆಯೋಜನೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರ ಅಧ್ಯಕ್ಷತೆಯಲ್ಲಿ ಶಾಸಕರಾದ ಗುರುರಾಜ್ ಗಂಟೆಹೊಳೆ ಅವರ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಮಹತ್ವದ ಸಭೆ ನಡೆಯಿತು.
ಬೈಂದೂರು ಉತ್ಸವ ಕಾರ್ಯಕ್ರಮದಲ್ಲಿ ಸರಕಾರದ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಮಾಹಿತಿಯನ್ನು ಪ್ರದರ್ಶಿಸುವುದರೊಂದಿಗೆ, ಗ್ರಾಮೀಣ ಭಾಗದ ಜನರಿಗೂ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆಯ ಲಾಭ ದೊರಕುವಂತಾಗಬೇಕು. ಬೈಂದೂರು ಉತ್ಸವವು ಜನವರಿ 24 ರಿಂದ 26 ರ ವರೆಗೆ ಬೈಂದೂರಿನಲ್ಲಿ ನಡೆಯಲಿದೆ. ಉತ್ಸವದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಜನಪರ ಕಾರ್ಯಕ್ರಮಗಳ ಮಾಹಿತಿಯನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿ, ಜನಸಾಮಾನ್ಯರಿಗೆ ತಲುಪುವಂತೆ ಮಾಡುವುದು ಇಲಾಖೆಗಳ ಜವಾಬ್ದಾರಿಯಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಠಿಸುತ್ತಿರುವ ಸಂಜೀವಿನಿ ಸಂಘದ ಸದಸ್ಯರು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳಗಳು ಉತ್ಸವದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ತಿಳಿಸಿದರು.
ಕ್ಷೇತ್ರ ವ್ಯಾಪ್ತಿಯ ಪ್ರತೀ 43 ಗ್ರಾಮ ಪಂಚಾಯತ್‌ಗಳಲ್ಲಿ ಗ್ರಾಮೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಸ್ಥಳೀಯ ಕ್ರೀಡಾಕೂಟ, ಜನಪದ-ಕಲೆ, ಆರೋಗ್ಯ ಮೇಳದ ಜೊತೆಗೆ ಇಲಾಖೆಗಳಲ್ಲಿ ಅನುಷ್ಠಾನಗೊಳಿಸಲಾಗಿರುವ ಸೌಲಭ್ಯಗಳ ಮಾಹಿತಿ ನೀಡಿದ್ದಲ್ಲಿ ಸರಕಾರದ ಯೋಜನೆಗಳನ್ನು ಗ್ರಾಮೀಣ ಭಾಗಗಳಲ್ಲಿಯೂ ಸಹ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಸಾಧ್ಯ. ಇಲಾಖೆಯ ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತರಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿದೆ ಎಂದರು.
ಅಧಿಕಾರಿಗಳಿಗೆ ಸೂಚನೆ:
ಉತ್ಸವದಲ್ಲಿ ವಸ್ತು ಪ್ರದರ್ಶನಕ್ಕೆ ಅನುಗುಣವಾಗಿ ಇಲಾಖೆಗಳಿಗೆ ಸ್ಥಳಾವಕಾಶ ಒದಗಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಇಲಾಖೆಗಳು ಭಾಗವಹಿಸಿ, ತಮ್ಮ ಇಲಾಖೆಗಳ ಯೋಜನೆಯನ್ನು ಆಕರ್ಷಕವಾಗಿ, ಜನಸಾಮಾನ್ಯರಿಗೆ ತಲುಪುವಂತೆ ಪ್ರದರ್ಶಿಸಬೇಕು. ಗ್ರಾಮೋತ್ಸವ ನಡೆಯುವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಯೂ ಸಹ ಆರೋಗ್ಯ ಶಿಬಿರಗಳನ್ನು ಏರ್ಪಡಿಸಬೇಕು. ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಬೈಂದೂರು ಉತ್ಸವದಲ್ಲಿ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕ್ಷೇತ್ರದ ವಿಶೇಷತೆ ಪರಿಚಯಿಸುವ ಹಬ್ಬ:
ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಮಾತನಾಡಿ, ಬೈಂದೂರು ಕ್ಷೇತ್ರದ ಪ್ರವಾಸೋದ್ಯಮ ಅವಕಾಶಗಳನ್ನು ಪರಿಚಯಿಸುವುದರೊಂದಿಗೆ, ಮತ್ತಷ್ಟು ಅಭಿವೃದ್ಧಿಪಡಿಸಲು, ಹೆಚ್ಚು ಹೆಚ್ಚು ಹೂಡಿಕೆದಾರರನ್ನು ಸೆಳೆಯುವಂತೆ ಮಾಡುವ ಉದ್ದೇಶದಿಂದ ಬೈಂದೂರು ಉತ್ಸವ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಕೇವಲ ಉತ್ಸವ ಆಗಿರದೇ ಮಾಹಿತಿ ಕಾರ್ಯಕ್ರಮವೂ ಆಗಿರಲಿದೆ. ಕ್ಷೇತ್ರದ ವಿಶೇಷತೆ, ಗ್ರಾಮೀಣ ಸೊಗಡು, ಆಹಾರೋತ್ಪನ್ನಕ್ಕೆ ಪೂರಕವಾಗಿ ವಿವಿಧ ಮಳಿಗೆಗಳು, ಕಲಾ ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮ ಹೀಗೆ ಎಲ್ಲವೂ ಉತ್ಸವದಲ್ಲಿ ಇರಲಿದೆ ಎಂದರು.
ಉತ್ಸವದಲ್ಲಿ ಬೈಂದೂರಿನ ಪ್ರೇಕ್ಷಣೀಯ ಸ್ಥಳಗಳು, ಸ್ಥಳೀಯ ಧಾರ್ಮಿಕ ಕ್ಷೇತ್ರಗಳ ವೀಡಿಯೋಗಳನ್ನು ಪ್ರದರ್ಶಿಸಬೇಕು. ಉತ್ಸವದ ದಿನಗಳಂದು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸಂಗ್ರಹವಾಗುವ ಕಸಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು ಎಂದರು.
ಉದ್ಯೋಗ, ಆರೋಗ್ಯ, ಕೃಷಿ, ಆಹಾರ, ವಿಜ್ಞಾನ, ಕರಕುಶಲ, ಶಿಕ್ಷಣ ಮೇಳಗಳು, ಸಂಜೀವಿನಿ ಸಂಘದ ಗ್ರಾಮೀಣ ಸಂತೆ, ಕಂಬಳೋತ್ಸವ, ಕರಾವಳಿಯ ಖಾದ್ಯಗಳು, ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಈ ಉತ್ಸವದಲ್ಲಿ ಪಾಲ್ಗೊಳ್ಳಲಿವೆ ಎಂದರು.
ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ವತಿಯಿಂದ ಆಯೋಜಿಸಲಾಗುವ ವಸ್ತು ಪ್ರದರ್ಶನಗಳ ಬಗ್ಗೆ ಮಾಹಿತಿ ಹಂಚಿಕೊಂಡರು
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಡಿ. ಎಫ್. ಓ ಗಣಪತಿ, ಉತ್ಸವ ಸಮಿತಿ ಸಂಚಾಲಕ ಶ್ರೀಗಣೇಶ್ ಗಾಣಿಗ, ಪ್ರಮುಖರಾದ ವೆಂಕಟೇಶ ಕಿಣಿ, ಅನಿತಾ ಆರ್. ಕೆ., ಪುಷ್ಪರಾಜ್ ಶೆಟ್ಟಿ,ನಾಗರಾಜ ನಾಕೈಂಬ್ಲಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಉತ್ಸವ ಸಮಿತಿಯ ಹಲವು ಉಪಸ್ಥಿತರಿದ್ದರು.
ಅಧಿಕಾರಿಗಳಿಗೆ ಕರೆ:
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ 2026 ನೇ ಜನವರಿ 24,25 ಹಾಗೂ 26 ರಲ್ಲಿ ನಡೆಸಲಾಗುವ ಬೈಂದೂರು ಉತ್ಸವ “ದ ಯಶಸ್ಸಿಗೆ ಉಡುಪಿ ಜಿಲ್ಲಾ ಮಟ್ಟದ ಎಲ್ಲಾ ಇಲಾಖೆಗಳು ಸಂಪೂರ್ಣ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಸಂಪೂರ್ಣ ಸಜ್ಜುಗೊಳ್ಳಲು ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ್ ಶೆಟ್ಟಿ ಗಂಟಿ ಹೊಳೆಯವರು ಸಭೆಯಲ್ಲಿ ಉಪಸ್ಥಿತರಿದ್ದ ಉಡುಪಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕರೆ ನೀಡಿದರು.
ಮೇಳಗಳ ಆಯೋಜನೆ ಚರ್ಚೆ:
ಕಳೆದ ವರ್ಷದಂತೆ ಈ ವರ್ಷವೂ ಬೈಂದೂರು ಕ್ಷೇತ್ರ ಹಾಗೂ ಜಿಲ್ಲೆಯ ಜನತೆಗೆ ಧಾರ್ಮಿಕ,ಸಾಮಾಜಿಕ,ಆರ್ಥಿಕ ಸಾಂಸ್ಕೃತಿಕ, ಔದ್ಯೋಗಿಕ,ವೈಜ್ಞಾನಿಕ ಹಾಗೂ ವೈಚಾರಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹಾಗೂ ವಿವಿಧ ಆಯಾಮಗಳಲ್ಲಿ ಸದಾವಕಾಶಗಳ ಸೃಷ್ಟಿಸಲು ವೇದಿಕೆ ಸಜ್ಜುಗೊಳಿಸುವ ಜೊತೆಗೆ ನಾಡಿನ ಕಲೆ, ಸಂಸ್ಕೃತಿ ಹಾಗೂ ಗ್ರಾಮೀಣ ಸೊಗಡಿನ ಶ್ರೀಮಂತ ಪರಂಪರೆಯನ್ನು ಇನ್ನಷ್ಟು ಶ್ರೀ ಮಂತಗೊಳಿಸಲು ಹಾಗೂ ಮುಂದಿನ ಪೀಳಿಗೆಗೂ ನಾಡು ನುಡಿ ಸಂಸ್ಕೃತಿಗಳ ಪರಿಚಯವನ್ನು ಗಟ್ಟಿಗೊಳಿಸಲು “ಬೈಂದೂರು ಉತ್ಸವ” ವು ಪ್ರಮುಖ ವೇದಿಕೆಯಾಗಲಿದೆ. ಹಾಗಾಗಿ ಜಿಲ್ಲಾ ಮಟ್ಟದ ಎಲ್ಲಾ ಇಲಾಖೆಗಳು ಈ ಸಂಭ್ರಮದಲ್ಲಿ ಪಾಲ್ಗೊಳ್ಳುವುದರ ಜೊತೆಗೆ ತಮ್ಮ ತಮ್ಮ ಇಲಾಖೆಯ ವತಿಯಿಂದ ಗ್ರಾಮೀಣ ಜನರ ಅಭ್ಯುದಯಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಜೋಡಿಸಿಕೊಂಡು ಉತ್ಸವದ ಯಶಸ್ಸಿಗೆ ತೊಡಗಿಸಿ ಕೊಳ್ಳಲು ಕರೆ ನೀಡಿದರು.ಕೃಷಿ ಮೇಳ, ತೋಟಗಾ ರಿಕಾ ಮೇಳ, ಆರೋಗ್ಯ ಮೇಳ, ಮೀನುಗಾರಿಕಾ ಮೇಳ, ಸಹಕಾರ ಮೇಳ, ಕೈಗಾರಿಕಾ ಮೇಳ, ವಿಜ್ಞಾನ ಮೇಳ, ಕ್ರೀಡಾ ಉತ್ಸವ, ಜಾನುವಾರು ಉತ್ಸವ ಸೇರಿದಂತೆ ಹೊಸತದ ಕ್ರಮಗಳು, ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಬಗ್ಗೆ ಇಲಾಖಾಧಿಕಾರಿ ಗಳೊಂದಿಗೆ ಚರ್ಚಿಸಲಾಯಿತು.
ಪಂಚಾಯತ್ ವ್ಯಾಪ್ತಿಯಲ್ಲಿ “ಗ್ರಾಮೋತ್ಸವ” ಆಯೋಜನೆ
ಗ್ರಾಮೀಣ ಭಾಗದ ಜನರಿಗೆ ವಿವಿಧ ಸರಕಾರಿ ಇಲಾಖೆಗಳ ವಿವಿಧ ಯೋಜನೆಗಳ ಮಾಹಿತಿ ಕೊರತೆ ಇಂದಿಗೂ ಇದ್ದು, ರಾಜ್ಯ ಹಾಗೂ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಗ್ರಾಮಸ್ಥರಿಗೆ ಅವರಿದ್ದಲ್ಲಿಗೆ ತಲುಪಿಸುವ ನಿಟ್ಟಿನಲ್ಲಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಪ್ರತೀ ಗ್ರಾಮಗಳ ವಿಶೇಷತೆಗಳನ್ನು ಪರಿಚಯಿಸಲು ಹಾಗೂ ಆಯಾ ಗ್ರಾಮಗಳ ಸುಪ್ತ ಸಾಮರ್ಥ್ಯಗಳನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಗ್ರಾಮಗಳಲ್ಲಿ ಗ್ರಾಮೋತ್ಸವ ಆಯೋಜಿಸಲು ತೀರ್ಮಾನಿಸಲಾಗಿದ್ದು ಎಲ್ಲಾ ಇಲಾಖೆಗಳು ಗ್ರಾಮಗಳನ್ನು ಆಯ್ಕೆ ಮಾಡಿ ತಮ್ಮ ತಮ್ಮ ಇಲಾಖೆಗಳ ಸೌಲಭ್ಯಗಳನ್ನು ಅರ್ಹ ಎಲ್ಲಾ ಗ್ರಾಮೀಣ ಜನರಿಗೆ ತಲುಪಿಸಲು ಹೊಸ ದಾರಿಯನ್ನು ಕಂಡು ಕೊಳ್ಳಬೇಕು. ಇದಕ್ಕಾಗಿ ವಿಶೇಷ ಕಾರ್ಯ ಯೋಜನೆ ಹಾಕಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು ಹಾಗೂ ಅಧಿಕಾರಿಗಳಿಂದ ಸಲಹೆ ಪಡೆಯಲಾಯಿತು.















