ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಲ್ಲಿ ಕೌಶಲ್ಯವೃದ್ಧಿಗೆ ಒತ್ತು ಕೊಡಬೇಕಾಗುತ್ತದೆ. ಯುವ ಸಮುದಾಯಕ್ಕೆ ಉದ್ಯೋಗದ ಕೊರತೆ ಕಾಡುತ್ತಿರುವ ಕಾಲಘಟ್ಟದಲ್ಲಿ ಕಾಲೇಜುಗಳಲ್ಲಿ ವ್ಯವಹಾರದ ಅರಿವು ನೀಡುವುದರಿಂದ ಕೆಲಸ ಕೊಡುವ ಕೈಗಳು ರೂಪುಗೊಳ್ಳಬಹುದು. ಇಂಥಹ ಕಾರ್ಯಕ್ರಮ ಪ್ರಸ್ತುತದ ಅವಶ್ಯಕತೆ ಹಾಗೂ ಅಗತ್ಯ ಎಂದು ಕೈಗಾರಿಕೋದ್ಯಮಿ ಹಾಗೂ ಸಾಮಾಜಿಕ ಮುಖಂಡರಾದ ಮುನಿಯಾಲ್ ಉದಯ ಕುಮಾರ್ ಶೆಟ್ಟಿ ಕಾರ್ಕಳ ಹೇಳಿದರು.
ಅವರು ಇಲ್ಲಿನ ಶ್ರೀ ವೆಂಕಟರಮಣ ಪ.ಪೂ ಕಾಲೇಜಿನಲ್ಲಿ ನಡೆದ ವಿ-ವಿಸ್ತಾರ 2k25 ವ್ಯವಹಾರ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸೋಲು ಕಲಿಸುವ ಪಾಠ ದೊಡ್ಡ ಯಶಸ್ಸಿಗೆ ಕಾರಣವಾಗುತ್ತದೆ. ಉದ್ಯಮ ರಂಗದಲ್ಲಿ ಸೋಲನ್ನು ಸ್ವೀಕರಿಸಲು ಸಿದ್ಧರಿರಬೇಕು. ಪ್ರಾರಂಭದಲ್ಲಿ ನಷ್ಟ, ಸೋಲು ಆದಾಗ ಕಂಗೆಡದೆ ತಾಳ್ಮೆಯಿ೦ದ ಮು೦ದುವರಿದಾಗ ಯಶಸ್ಸು ಲಭಿಸುತ್ತದೆ. ಏಕಾಗ್ರತೆ ಎಲ್ಲದ್ದಕ್ಕೂ ಅತೀ ಅಗತ್ಯ ಎ೦ದರು.

ಉಡುಪಿ ಮಂಗಳೂರು ಜಿಲ್ಲೆಗಳಲ್ಲಿ ವಿದ್ಯಾವಂತ ಯುವ ಸಮುದಾಯಕ್ಕೆ ಸೂಕ್ತ ಉದ್ಯೋಗ ನೀಡುವ ನೀಡುವ ಐಟಿ ಪಾರ್ಕ್, ಸಾಪ್ಟ್ ವೇರ್‌ಗಳು ಬರಬೇಕು. ಈಗ ಜಿಲ್ಲೆಯಲ್ಲಿ ಉದ್ಯೋಗವಕಾಶದ ಕೊರತೆಯಿಂದ ಬೆಂಗಳೂರು, ಮುಂಬೈ ಮೊದಲಾದ ಕಡೆ ಹೋಗುತ್ತಿದ್ದಾರೆ. ಇದರಿಂದ ಮನೆಯಲ್ಲಿ ತ೦ದೆತಾಯಿಗಳು ಅನಾಥರಾಗುತ್ತಿದ್ದಾರೆ ಎಂದು ಹೇಳಿದ ಅವರು, ನಮ್ಮ ವಿದ್ಯಾರ್ಥಿಗಳು ಕೇವಲ ಡಾಕ್ಟರ್, ಇ೦ಜಿನಿಯರ್ ಸಿಎ ಆಗುವುದರಲ್ಲಿಯೇ ಆಸಕ್ತಿ ಹೊಂದತ್ತಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬೇಕು, ತಹಶೀಲ್ದಾರ್, ಸಹಾಯ ಆಯುಕ್ತರು, ಜಿಲ್ಲಾಧಿಕಾರಿಗಳು, ಪೊಲೀಸ್ ವರೀಷ್ಠಾಧಿಕಾರಿಯಂಥಹ ಉನ್ನತ ಅಧಿಕಾರಿಗಳು ನಮ್ಮವರು ಆಗಬೇಕು. ಆ ಬಗ್ಗೆ ವಿದ್ಯಾರ್ಥಿಗಳು ಗುರಿ ಹಾಕಿಕೊಳ್ಳಬೇಕು ಜೊತೆಯಲ್ಲಿ ಪ್ರಜಾಪ್ರಭುತ್ವದ ಮೌಲ್ಯವನ್ನು ತಿಳಿದುಕೊಳ್ಳಬೇಕು ಎಂದರು.
ಶ್ರೀ ವೆಂಕಟರಮಣ ದೇವ್ ಎಜುಕೇಶನಲ್ & ಕಲ್ಬರಲ್ ಟ್ರಸ್ಟ್ ನ ಅಧ್ಯಕ್ಷರಾದ ಕೆ. ರಾಮಕೃಷ್ಣ ಕಾಮತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಆಸಕ್ತಿಯಿಂದ ವಿ-ವಿಸ್ತಾರ ವ್ಯವಹಾರ ಮೇಳ ಯಶಸ್ವಿಯಾಗಿ ಐದನೇ ವರ್ಷದಲ್ಲಿ ನಡೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಪ್ರಬುದ್ದತೆ ಕಂಡುಕೊಳ್ಳುತ್ತಿದೆ. ವ್ಯವಹಾರ, ಉದ್ಯಮ ಸುಲಭವಲ್ಲ. ತಾಳ್ಮೆ ಶ್ರದ್ಧೆ ಆಸಕ್ತಿ ಯಶಸ್ವಿ ಉದ್ಯಮಿಯಾಗಲು ಸಹಕಾರಿ. ಲಾಭ ನಷ್ಠವನ್ನು ಸಮಾನ ಮನಸ್ಸಿನಿಂದ ಸ್ವೀಕರಿಸಿದಾಗ ಮಾದರಿ ಉದ್ಯಮಿಗಳಾಗಲು ಸಾಧ್ಯ ಎ೦ದರು.

ಈ ಸಂದರ್ಭದಲ್ಲಿ ಸೇವಾಕ್ಷೇತ್ರದಲ್ಲಿ ಸಾಧನೆ ಮಾಡಿದ ಮುರಳಿ ಕಡೆಕಾರ್ ಅವರಿಗೆ ಸೇವಾಶ್ರೀ, ನಿವೃತ್ತ ಮುಖ್ಯೋಪಾಧ್ಯಾಯ, ಶಿಕ್ಷಣ ತಜ್ಞ ಬಿ. ವಿಶ್ವೇಶ್ವರ ಅಡಿಗ ಅವರಿಗೆ ಜ್ಞಾನಶ್ರೀ, ಹಿರಿಯ ಯಕ್ಷಗಾನ ಹಾಸ್ಯಕಲಾವಿದ ಮಹಾಬಲ ದೇವಾಡಿಗ ಕಮಲಶಿಲೆ ಯಕ್ಷಶ್ರೀ ನಿವೃತ್ತ ಯೋಧ ಗಣಪತಿ ಖಾರ್ವಿ ಬಸೂರು ಅವರಿಗೆ ಶೌರ್ಯಶ್ರೀ, ಪ್ರಗತಿಪರ ಕೃಷಿಕ ಗೌತಮ್ ಶೆಟ್ಟಿ ಅವರಿಗೆ ಕರ್ಮಶ್ರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಟ್ರಸ್ಟ್‌ನ ಕಾರ್ಯದರ್ಶಿ ಕೆ. ರಾಧಾಕೃಷ್ಟ ಶೆಣೈ, ಕೋಶಾಧಿಕಾರಿ ಕೆ.ಲಕ್ಷ್ಮೀನಾರಾಯಣ ಶೆಣೈ, ಶ್ರೀ ವೆಂಕಟರಮಣ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಶಿಕ್ಷಕರಾದ ಕೃಷ್ಣ ಅಡಿಗ, ರೇಷ್ಮಾ ಡಿಸೋಜ, ಪ್ರಮೀಣ ಡಿಸೋಜ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಗಾಣಿಗ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಮಂಜುನಾಥ ಪ್ರಸ್ತಾವಿಕ ಮಾತುಗಳನ್ನಾಡಿದರು. ಉಪ ಪ್ರಾಂಶುಪಾಲರಾದ ಸುಜಯ್ ಕೋಟೆಗಾರ್ ವಂದಿಸಿದರು. ಉಪನ್ಯಾಸಕರಾದ ಅಮೃತ ಹಾಗೂ ಶಿವರಾಜ ಕಾರ್ಯಕ್ರಮ ನಿರ್ವಹಿಸಿದರು.
ಉಡುಪಿ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಪದವಿಪೂರ್ವ ವಿಭಾಗದ ವಿದ್ಯಾರ್ಥಿಗಳಲ್ಲಿ ವ್ಯವಹಾರ ಕೌಶಲ್ಯದ ಅರಿವು ಮೂಡಿಸುವ ನಿಟ್ಟಿನಲ್ಲಿ ಆರಂಭಿಸಿದ ವ್ಯವಹಾರ ದಿನ ಅದ್ಭುತ ಯಶಸ್ಸು ಪಡೆದುಕೊಂಡು ಈ ವರ್ಷ ಐದನೇ ವರ್ಷದ ವ್ಯವಹಾರ ದಿನ ಅಭುತಪೂರ್ವ ಯಶಸ್ಸು ಕಂಡಿತು. ಈ ಬಾರಿ 60 ಕ್ಕೂ ಅಧಿಕ ವೈವಿಧ್ಯಮಯ ಮಳಿಗೆಗಳನ್ನು ವಿದ್ಯಾರ್ಥಿಗಳು ತೆರೆದಿದ್ದರು. ಗ್ರಾಹಕರು ಕೂಡಾ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ವಿದ್ಯಾರ್ಥಿಗಳಿಗೆ ಜ್ಞಾನದೊಂದಿಗೆ ಸದೃಢ ಸಮಾಜ ನಿರ್ಮಾಣವಾಗಬೇಕು ಎನ್ನುವ ನಿಟ್ಟಿನಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ವ್ಯವಹಾರ ಮೇಳದ ಮೂಲಕ ವ್ಯವಹಾರ ಕೌಶಲ್ಯತೆ, ಉದ್ಯಮಶೀಲತೆ, ಆತ್ಮವಿಶ್ವಾಸ, ಮಾರುಕಟ್ಟೆ ಪರಿಚಯ, ಸವಾಲುಗಳ ಬಗ್ಗೆ ಅರಿವಾಗುವ ನಿಟ್ಟಿನಲ್ಲಿ ಕಾರ್ಯಕ್ರಮ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.















