ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ನಗರ ಹಾಗೂ ಗ್ರಾಮೀಣ ಪ್ರದೇಶಗಳ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ವೇತನ ಸೇರಿದಂತೆ ಮತ್ತಿತರ ಸೌಲಭ್ಯಗಳು ವಿಳಂಬವಿಲ್ಲದೇ ಪ್ರತಿ ತಿಂಗಳು ಪಾವತಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಶುಕ್ರವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತ ಸಮಿತಿಯ ನಾಲ್ಕನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರು, ಲೋಡರ್, ಕ್ಲೀರ್ಸ್ ಹಾಗೂ ವಾಹನ ಚಾಲಕರುಗಳಿಗೆ ಪ್ರತಿ ಮಾಹೆಯ ವೇತನವನ್ನು ವಿಳಂಬವಿಲ್ಲದೇ ಕಾಲಕಾಲಕ್ಕೆ ಪಾವತಿಸಬೇಕು ಹಾಗೂ ಅವರುಗಳಿಗೆ ಪಿ.ಎಫ್ ಹಾಗೂ ಇ.ಎಸ್.ಐ ಕಟಾವಣೆ ಆಗುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಂಡು ಹೊರ ಗುತ್ತಿಗೆದಾರರಿಗೆ ಮಾಸಿಕ ಬಿಲ್‌ಗಳನ್ನು ಪಾವತಿಸಬೇಕೆಂದು ತಿಳಿಸಿದರು.

ಸಫಾಯಿ ಕರ್ಮಚಾರಿ ಹಾಗೂ ಗುರುತಿಸಲ್ಪಟ್ಟ ಮಾನ್ಯುಯಲ್ ಸ್ಕ್ಯಾವೆಂಜರ್‌ಗಳು ಹಾಗೂ ಮೃತಪಟ್ಟ ಮಾನ್ಯುಯಲ್ ಸ್ಕ್ಯಾವೆಂಜರ್‌ಗಳ ಕುಟುಂಬದ ಅವಲಂಬಿತರಿಗೆ ಗುರುತಿನ ಚೀಟಿ ನೀಡುವ ಜೊತೆಗೆ ಸರಕಾರದ ಸರಕಾರದ ವಿವಿಧ ಸೌಲಭ್ಯಗಳು ಸೇರಿದಂತೆ ಪುನರ್ವಸತಿ ಯೋಜನೆಗಳನ್ನು ಕಲ್ಪಿಸಬೇಕು ಎಂದರು.
ಮಾನ್ಯುಯಲ್ ಸ್ಕ್ಯಾವೆಂಜರ್ಸ್ ಪದ್ಧತಿಯು ಈಗಾಗಲೇ ದೇಶಾದ್ಯಂತ ನಿಷೇಧವಿದೆ. ನಗರ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಾನ್ಯುಯಲ್ ಸ್ಕ್ಯಾವೆಂಜರ್ ಅನ್ನು ನೇಮಿಸಿಕೊಂಡು ಕೆಲಸ ಕಾರ್ಯವನ್ನು ಮಾಡಿಸಿದ್ದಲ್ಲಿ ಅಂತಹವರ ಮೇಲೆ ಕಾನೂನಿನ ಕ್ರಮ ಕೈಗೊಳ್ಳಬೇಕು. ಮಾನ್ಯುಯಲ್ ಸ್ಕ್ಯಾವೆಂಜರ್ ವೃತ್ತಿ ನಿಷೇಧ ವಿರುವ ಹಿನ್ನೆಲೆ, ನಗರ ಹಾಗೂ ಗ್ರಾಮೀಣ ಪ್ರದೇಶ ವ್ಯಾಪ್ತಿಗಳಲ್ಲಿ ಕಡ್ಡಾಯವಾಗಿ ಸಕ್ಕಿಂಗ್ ಹಾಗೂ ಜೆಟ್ಟಿಂಗ್ ಯಂತ್ರಗಳ ಬಳಕೆಯೊಂದಿಗೆ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಬೇಕು. ಮಲ ತ್ಯಾಜ್ಯ ನಿರ್ವಹಣೆಯನ್ನು ವೈಜ್ಞಾನಿಕ ರೀತಿಯಲ್ಲಿ ಎಫ್.ಎಸ್.ಎಂ.ಎಸ್ ಘಟಕಗಳಲ್ಲಿ ವಿಲೇವಾರಿ ಮಾಡಬೇಕು ಎಂದ ಅವರು, ಜಿಲ್ಲೆಯಲ್ಲಿ ಕೈಗೊಂಡಿರುವ ಎಫ್.ಎಸ್.ಎಂ.ಎಸ್ ಘಟಕ ಯೋಜನೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸಿ ಅವುಗಳ ಬಳಕೆಯಾಗಲು ಸ್ಥಳೀಯ ಸಂಸ್ಥೆಗಳು ಕ್ರಮವಹಿಸಬೇಕು ಎಂದರು.
ಪೌರ ಕಾರ್ಮಿಕರಿಗೆ ಉತ್ತಮ ಗುಣಮಟ್ಟದ ಆಹಾರವನ್ನು ಒದಗಿಸಬೇಕು ಎಂದ ಅವರು, ದೈನಂದಿನ ಸ್ವಚ್ಛತಾ ಕಾರ್ಯದ ಕರ್ತವ್ಯ ನಿರ್ವಹಿಸುವಾಗ ತಪ್ಪದೆ ಸುರಕ್ಷತಾ ಪರಿಕರಗಳನ್ನು ಬಳಸಿ ಕರ್ತವ್ಯವನ್ನು ನಿರ್ವಹಿಸಬೇಕು. ಇದರಿಂದಾಗಿ ಉತ್ತಮ ಆರೋಗ್ಯವನ್ನು ಹೊಂದಲು ಸಾಧ್ಯ. ಈ ಬಗ್ಗೆ ಮೇಲುಸ್ತುವಾರಿಯನ್ನು ಅಧಿಕಾರಿಗಳು ವಹಿಸಬೇಕು ಎಂದರು.
ಸಫಾಯಿ ಕರ್ಮಚಾರಿಗಳಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಹಾಗೂ ಮಾಸ್ಟರ್ ಹೆಲ್ತ್ ಚೆಕ್‌ಅಪ್ ಅನ್ನು ಆಗಿಂದಾಗ್ಗೆ ಮಾಡಿಸಬೇಕು. ಅಗತ್ಯವಿದ್ದಲ್ಲಿ ಉನ್ನತ ಚಿಕಿತ್ಸೆಗಳನ್ನು ಸಹ ಕೊಡಿಸಬೇಕು ಎಂದ ಅವರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ಮಾನ್ಯುಯಲ್ ಸ್ಕ್ಯಾವೆಂಜರ್ ಹಾಗೂ ಪೌರ ಕಾರ್ಮಿಕರ ಮಕ್ಕಳಿಗೆ ಶೇ.5ರ ಪ್ರವೇಶ ನೀಡಲು ಕಾರ್ಯಪ್ರವೃತ್ತರಾಗಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್. ಕಾದ್ರೋಳ್ಳಿ, ಸಹಾಯಕ ಕಮೀಷನರ್ ರಶ್ಮಿ ಎಸ್.ಆರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾರಾಯಣ ಸ್ವಾಮಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು.















