ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಕೃಷಿ ಇಲಾಖೆಯ ವತಿಯಿಂದ ಸಿರಿಧಾನ್ಯ ಮತ್ತು ಸಾವಯವ ಅಂತರ ರಾಷ್ಟ್ರೀಯ ವಾಣಿಜ್ಯ ಮೇಳ – 2026ರ ಅಂಗವಾಗಿ ರಾಜ್ಯ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯ ಪೂರ್ವಭಾವಿಯಾಗಿ ಜಿಲ್ಲಾ ಮಟ್ಟದಲ್ಲಿ “ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕಸ್ಪರ್ಧೆ” ಯು ಡಿಸೆಂಬರ್ 23 ರಂದು ಬೆಳಗ್ಗೆ 11 ಗಂಟೆಗೆ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಛೇರಿ ಸಂಕೀರ್ಣದಲ್ಲಿ ಆಯೋಜಿಸಲಾಗಿದೆ.
ಸದರಿ ಸ್ಪರ್ಧೆಯಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು/ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಜಿಲ್ಲೆಯ ಎಲ್ಲಾ ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶವಿರುತ್ತದೆ. ಅಭ್ಯರ್ಥಿಗಳು ತಮ್ಮ ಭಾವಚಿತ್ರದೊಂದಿಗೆ ಹೆಸರು, ವಿಳಾಸ ಮತ್ತು ತಯಾರಿಸುವ ಖಾದ್ಯ, ಬೇಕಾಗುವ ಸಾಮಗ್ರಿಗಳು, ತಯಾರಿಸಲು ಬೇಕಾಗುವ ಸಮಯ ಹಾಗೂ ತಯಾರಿಸುವ ವಿಧಾನದ ಸಂಕ್ಷಿಪ್ತ ಮಾಹಿತಿಯೊಂದಿಗೆ ಅರ್ಜಿಯನ್ನು ಡಿ. 22 ರ ಒಳಗಾಗಿ ಇ-ಮೇಲ್ agrijdaudupi@gmail.com ಅಥವಾ ಖುದ್ದಾಗಿ/ಪೋಸ್ಟ್ ಮುಖಾಂತರ ಜಂಟಿ ಕೃಷಿ ನಿರ್ದೇಶಕರ ಕಛೇರಿ, ರಜತಾದ್ರಿ, ಮಣಿಪಾಲ, ಉಡುಪಿ ಜಿಲ್ಲೆ ವಿಳಾಸಕ್ಕೆ ಕಳುಹಿಸಬಹುದಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಸೂಚನೆಗಳು:
ಪ್ರತಿ ಸ್ಪರ್ಧಿಯು ಸಿರಿಧಾನ್ಯದ ಒಂದು ಸಿಹಿ ಅಥವಾ ಖಾರದ ತಿನಿಸು ಅಥವಾ ಒಂದು ಮರೆತು ಹೋದ ಖಾದ್ಯ (ಸಸ್ಯಾಹಾರಿ ತಿನಿಸುಗಳು ಮಾತ್ರ) ತಯಾರಿಸಲು ಅವಕಾಶವಿರುತ್ತದೆ. ತಮ್ಮ ಅರ್ಜಿಯಲ್ಲಿ ನಮೂದಿಸಿದ ತಿನಿಸುಗಳನ್ನು, ಮನೆಯಲ್ಲಿಯೇ ತಯಾರಿಸಿ, ಡಿ. 23 ರಂದು ಬೆಳಗ್ಗೆ 11 ಗಂಟೆಗೆ ಪಾಕಸ್ಪರ್ದೆ ನಡೆಯುವ ಸ್ಥಳದಲ್ಲಿ (ಜಿಲ್ಲಾಡಳಿತ ಕಛೇರಿ ಸಂಕೀರ್ಣ, ರಜತಾದ್ರಿ, ಮಣಿಪಾಲ) ಪ್ರದರ್ಶಿಸಬೇಕು. ತಯಾರಿಸಿದ ತಿನಿಸುಗಳ ಪ್ರದರ್ಶನ, ಬಳಸಿದ ಸಾಮಗ್ರಿಗಳು, ತೋರಿಕೆ, ರುಚಿ, ಸುವಾಸನೆ, ಪೌಷ್ಟಿಕತೆಗಳ ಮೇಲೆ ಅಂತಿಮ ತೀರ್ಪು ಕೈಗೊಳ್ಳಲಾಗುವುದು.
ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿದ್ದು, ಜಿಲ್ಲಾ ಮಟ್ಟದಲ್ಲಿ ಸಿಹಿ, ಖಾರ (ಸಿರಿಧಾನ್ಯ ಖಾದ್ಯಗಳಿಗೆ ಮಾತ್ರ) ಮತ್ತು ಮರೆತು ಹೋದ ಖಾದ್ಯಗಳ ತಿನಿಸಿಗೆ ಪ್ರತ್ಯೇಕ ಬಹುಮಾನವಿರುತ್ತದೆ. ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ಕ್ರಮವಾಗಿ ರೂ. 5000, ರೂ. 3,000 ಹಾಗೂ ರೂ. 2,000ವನ್ನು ನೀಡಲಾಗುವುದು.
ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದವರು ನಿಗದಿತ ದಿನಾಂಕದಂದು ಬೆಂಗಳೂರಿನಲ್ಲಿ ಏರ್ಪಡಿಸುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ಖಾದ್ಯವನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳನ್ನು ತಾವೇ ತೆಗೆದುಕೊಂಡು, ನಿಗದಿತ ಸ್ಥಳ ಹಾಗೂ ಸಮಯದಲ್ಲಿ ಖುದ್ದಾಗಿ ಖಾದ್ಯವನ್ನು ಅಲ್ಲಿಯೇ ತಯಾರಿಸಲು ಸಿದ್ಧರಾಗಿರಬೇಕು ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.















