ಬೈಂದೂರು: ರಾಜ್ಯದಲ್ಲಿ ಪ್ರತೀ ವರ್ಷ ಒಂದೂವರೆ ಲಕ್ಷ ವಿದ್ಯಾರ್ಥಿಗಳು ಡಾಕ್ಟರ್, ಇಂಜಿನೀಯರ್ ಪದವಿ ಪಡೆಯುತ್ತಿದ್ದಾರೆ. ಮೂಲಭೂತಸೌಕರ್ಯಗಳ ಬದಲಾವಣೆಯಾಗದ, ನಮ್ಮ ಹಿಂದಿನವರ ಹಾಗೆ ಹೊಸತನವೇನೂ ಇಲ್ಲದ ಈ ಪದವಿ ಪಡೆದು ವೃತ್ತಿ ಪ್ರಾರಂಬಿಸುವ ಮೊದಲು ನಾವು ಕಲಿತ ಶಿಕ್ಷಣದಲ್ಲಿ ಹೊಸ ಚಿಂತನೆಗಳು ಹಾಗೂ ಒಳ್ಳೆಯ ಉದ್ದೇಶದಿಂದ ಕೂಡಿದ ಅಗತ್ಯವಾದ ಬದಲಾವಣೆಗಳಾಬೇಕು. ಸಮಾಜದ ಪಾಲುದಾರಿಕೆ ಹಾಗೂ ಉತ್ತಮ ನಾಗರೀಕತೆಗೆ ಉನ್ನತ ಶಿಕ್ಷಣದ ಅಗತ್ಯವಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಕೆ. ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಶಿರೂರು ಗ್ರೀನ್ ವ್ಯಾಲಿ ನ್ಯಾಶನಲ್ ಸ್ಕೂಲ್ ಮತ್ತು ಪದವಿಪೂರ್ವ ಕಾಲೇಜಿನ ೧೫ನೇ ವಾರ್ಚಿಕೋತ್ಸವದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಸ್ವ-ಅಭಿವೃದ್ಧಿನ್ನೆ ಗಮನದಲ್ಲಿಟ್ಟುಕೊಂಡು ದೊಡ್ಡ ಮೊತ್ತದ ಸಂಪಾದನೆಗಾಗಿ ಸೀಮಿತವಾದ ಉನ್ನತ ಶಿಕ್ಷಣದಿಂದ ಲಾಭವಾಗದು. ಇಂಜಿನೀಯರ್, ಡಾಕ್ಟರ್ ಆಗುವ ವಿದ್ಯಾರ್ಥಿಗಳಿಗೆ ಹೊಸ ಆವಿಷ್ಕಾರದ ಸರದಾರವಾಗುವ ದೊಡ್ಡ ಕನಸಿನೊಂದಿಗೆ ದೂರದೃಷ್ಠಿತ್ವದಿಂದ ಕೂಡಿದ ಹೊಸ ಹೊಸ ಪ್ರಯೋಗಗಳನ್ನು ಮಾಡಿ ಕಡಿಮೆ ಖರ್ಚಿನಲ್ಲಿ ಸಾಮಾನ್ಯ ಜನರಿಗೂ ಅನುಕೂಲವಾಗುವಂತಹ ಸಾಧನಗಳನ್ನು ತಯಾರಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು. ಹೊಸ ಸಂಶೋದನೆಯಿಂದ ಸಕಾರಾತ್ಮಕ ಫಲಿತಾಂಶ ಬಂದರೆ ವಿಶ್ವದಾಂದ್ಯಂತ ಕೀರ್ತಿಗಳಿಸಬೇಕು. ದೇಶದ, ಸಮಾಜದ ಅಭಿವೃದ್ಧಿಯ ದೃಷ್ಠಿಯಿಂದ ವಿವಿಧೋಪಾಯಗಳ (ಡಿಫರೆಂಟ್ ಪ್ಲಾನ್) ಕುರಿತಾದ ಯೋಚನೆ ಮಾಡಬೇಕು. ಇಂಡೋನೇಶಿಯಾ ಹಾಗೂ ಶ್ರೀಲಂಕಾಗಳಲ್ಲಿ ಮೊಬೈಲ್ ಟವರ್ ಇಲ್ಲದೇ ಕೇವಲ ಬೆಲೂನಿನ ಮೂಲಕ ನೆಟ್‌ವರ್ಕ್ ಕನೆಕ್ಟ್ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ಅವರು ಉದಾಹರಿಸಿದರು.
ಮಲೇರಿಯಾ, ಕ್ಯಾನ್ಸರ್ ಮುಂತಾದ ಮಾರಕ ರೋಗಳಿಗೆ ತಾತ್ಕಾಲಿಕ ಉಪಶಮನಕ್ಕೆ ಔಷಧಗಳು ಸಿಗುತ್ತದೆ. ಆದರೆ ವೈದ್ಯಶಿಕ್ಷಣ ಪಡೆಯುವವರು ಶಾಶ್ವತವಾಗಿ ಗುಣಪಡಿಸುವಂತಹ ಔಷಧಿ ಕಂಡುಹಿಡಿಯುವ ಪ್ರಯತ್ನ ಮಾಡಬಹುದು. ಇಂಜಿನೀಯರ್‌ಗಳು ಕಡಿಮೆ ಬಜೆಟಿನ ದ್ವಿಚಕ್ರ, ತ್ರಿಚಕ್ರ ವಾಹನಗಳನ್ನು ತಯಾರುಮಾಡುವ ಯೋಚನೆ ಮಾಡಬಹುದು ಎಂದರು.
ಮಣಿಪಾಲ್ ವಿಶ್ವವಿದ್ಯಾಲಯದ ರಿಜಿಸ್ಟಾರ್ ಡಾ. ನಾರಾಯಣ ಸಭಾಹಿತ್ ಅಧ್ಯಕ್ಷತೆವಹಿಸಿದ್ದರು. ಬ್ರಹ್ಮಾವರ ಎಸ್.ಎಂ.ಎಸ್. ಕಾಲೇಜಿನ ಪ್ರಾಂಶುಪಾಲ ಡಾ. ವೈ. ರವಿಂದ್ರನಾಥ್ ರಾವ್ ಉಪಸ್ಥಿತರಿದ್ದರು. ಗ್ರೀನ್ ವ್ಯಾಲಿ ನ್ಯಾಶನಲ್ ಸ್ಕೂಲ್ ಮತ್ತು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜಾನ್ ಮೆಥ್ಯೂ ಸ್ವಾಗತಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.