ಬೈಂದೂರು: ದೇಶದ ಶಕ್ತಿಯಾಗಿರುವ ಯುವಕರು ತಮ್ಮ ಭವಿಷ್ಯದಲ್ಲಿ ಉತ್ತಮ ಧ್ಯೇಯೋದ್ಧೇಶ ಹಾಗೂ ಚಿಂತನೆಯನ್ನು ಹೊಂದಿ ಸಧೃಡ ಸಮಾಜ ನಿರ್ಮಾಣದಲ್ಲಿ ಕೈಜೋಡಿಸಬೇಕಿದೆ ಎಂದು ತಾ.ಪಂ ಸದಸ್ಯ ಎಸ್. ರಾಜು ಪೂಜಾರಿ ಹೇಳಿದರು.
ಪಡುವರಿ ಚಿತ್ತಾರಿ ಕ್ರೀಡಾಂಗಣದಲ್ಲಿ ನಡೆದ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್‌ನ 12ನೇ ವರ್ಷದ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದಲ್ಲಿ, 30 ಗಜಗಳ ಕ್ರಿಕೆಟ್ ಪಂದ್ಯಾಟದ ವಿಜೇತ ಕೆ.ಸಿ.ಸಿ ದೊಂಬೆ ತಂಡಕ್ಕೆ ಚಿತ್ತಾರಿ ಮಹಾಗಣಪತಿ ಟ್ರೋಫಿ-2015 ಹಸ್ತಾಂತರಿಸಿ ಮಾತನಾಡಿದರು. ಸಂಘ ಸಂಸ್ಥೆಗಳಲ್ಲಿ ಯುವಜನರ ಪಾತ್ರ ಅತ್ಯಂತ ಹಿರಿದಾಗಿದ್ದು, ಶಿಕ್ಷಣ, ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಾಲಕಾಲಕ್ಕೆ ಸಂಘಟಿಸುವ ಮೂಲಕ ಸಮಾಜದ ಪ್ರತಿಭಾವಂತರು ಮತ್ತು ಸಾಧಕರನ್ನು ಗುರುತಿಸಿ ಗೌರವಿಸುವ ಮನೋಭಾವನೆಯನ್ನು ಅಳವಡಿಸಿಕೊಳ್ಳಬೇಕು. ಇಂತಹ ಸಮಾಜಮುಖಿ ಚಟುವಟಿಕೆಯಿಂದ ಊರಿನ ಹೆಸರು ಮತ್ತು ಕೀರ್ತಿ ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದರು. (ಕುಂದಾಪ್ರ ಡಾಟ್ ಕಾಂ)
ಪಡುವರಿ ಗ್ರಾಪಂ ಮಾಜಿ ಅಧ್ಯಕ್ಷ ಸುರೇಶ ಬಟವಾಡಿ ಅಧ್ಯಕ್ಷತೆವಹಿಸಿ ಸಮಾರಂಭವನ್ನು ಉದ್ಘಾಟಿಸಿದರು. ಸುರಭಿ ಬೈಂದೂರು ಸ್ಥಾಪಕಾಧ್ಯಕ್ಷ ಸುಧಾಕರ್ ಪಿ ಇವರನ್ನು ಸನ್ಮಾನಿಸಲಾಯಿತು. ಪಡುವರಿ ಗ್ರಾಪಂ ಅಧ್ಯಕ್ಷೆ ದೀಪಾ ಶೆಟ್ಟಿ, ಉಪಾಧ್ಯಕ್ಷ ಸದಾಶಿವ ಡಿ. ಪಡುವರಿ, ಸದಸ್ಯ ಸಂಜಯ ದೇವಾಡಿಗ, ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಜಯಾನಂದ ಹೋಬಳಿದಾರ್, ದೇವಾಡಿಗರ ಒಕ್ಕೂಟದ ಅಧ್ಯಕ್ಷ ಕೆ. ಜಿ. ಸುಬ್ಬ ದೇವಾಡಿಗ, ಶಿಕ್ಷಕ ಗುರುರಾಜ ಭಟ್, ಉದ್ಯಮಿ ಜಗದೀಶ ಆಚಾರ್, ಕ್ಲಬ್‌ನ ಕಾರ್ಯದರ್ಶಿ ಪ್ರಥ್ವಿರಾಜ್ ಶೆಟ್ಟಿ ಉಪಸ್ಥಿತರಿದ್ದರು.
ಫೈನಲ್ ಪಂದ್ಯಾಟದಲ್ಲಿ 8ಸ್ಟಾರ್ ಉಪ್ಪುಂದ ರನ್ನರ್‌ಅಪ್ ಪ್ರಶಸ್ತಿ ಪಡೆಯಿತು. ಕೆ.ಸಿ.ಸಿ. ದೊಂಬೆ ತಂಡದ ಮನೋಜ್ ಪಂದ್ಯಶ್ರೇಷ್ಟ ಹಾಗೂ ಇದೇ ತಂಡದ ಕಿರಣ್ ಸರಣಿಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು. ಬೈಂದೂರು ಗಾಣಿಗ ಸೇವಾ ಸಂಘದ ಅಧ್ಯಕ್ಷ ನಾಗರಾಜ ಗಾಣಿಗ ವಿಜೇತರಿಗೆ ಬಹುಮಾನ ವಿತರಿಸಿದರು. ಕ್ಲಬ್‌ನ ಅಧ್ಯಕ್ಷ ಬಿಬ್ಬಾಡಹಿತ್ಲು ಸಂತೋಷ್ ಶೆಟ್ಟಿ ಸ್ವಾಗತಿಸಿ ರಾಜೇಶ್ ಪೂಜಾರಿ ವಂದಿಸಿದರು. ನಂತರ ಲಾವಣ್ಯ ಬೈಂದೂರು ಕಲಾವಿದರಿಂದ ನಾಟಕ ಮತ್ತು ಭಟ್ಕಳದ ಸಂಜನಾ ಡ್ಯಾನ್ಸ್ ಅಕಾಡೆಮಿ ಸದಸ್ಯರಿಂದ ಡ್ಯಾನ್ಸ್ ಮೇನಿಯಾ ಜರುಗಿತು.