ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪ್ರತಿ ಮಗುವಿಗೂ ತಾಯಿಯೇ ಮೊದಲ ಗುರು. ತಂದೆ – ತಾಯಿಯರ ಪ್ರತಿ ಚಲನವಲನವನ್ನು ಮಗು ಅನುಸರಿಸುತ್ತಾ ಬೆಳೆಯುತ್ತದೆ. ಹಾಗಾಗಿ ಮಕ್ಕಳಿಗೆ ಶಿಸ್ತು ರೂಡಿಸುವ ಮೊದಲೂ ಪೋಷಕರೂ ಶಿಸ್ತಿನ ಜೀವನ ರೂಡಿಸಿಕೊಳ್ಳುವುದು ಬಹುಮುಖ್ಯ ಎಂದು ಕುಂದಾಪ್ರ ಡಾಟ್ ಕಾಂ ಸಂಪಾದಕ ಸುನಿಲ್ ಹೆಚ್. ಜಿ. ಹೇಳಿದರು.


ಅವರು ಗುರುವಾರ ಇಲ್ಲಿನ ಸೇವಾ ಸಂಗಮ ಶಿಶುಮಂದಿರದ ವಿದ್ಯಾರ್ಥಿಗಳಿಗೆ ಪ್ರಶಸ್ತನ ಪತ್ರವನ್ನು ವಿತರಿಸಿ ಮಾತನಾಡಿದರು. ನಾವೆಲ್ಲರೂ ಆಧುನಿಕ ಜೀವನ ಶೈಲಿಯತ್ತ ಮುಖಮಾಡಿ ಒತ್ತಡದ ಬದುಕಿನತ್ತ ಸಾಗುತ್ತಿದ್ದೇವೆ. ಆದಾಗ್ಯೂ ಪೊಷಕರ ಒತ್ತಡಗಳನ್ನು ಮಕ್ಕಳ ಮೇಲೆ ಹೇರದೇ ಅವರಿಗೆ ಅವಶ್ಯ ಸಮಯ ನೀಡುವುದು, ಅವರ ಸಣ್ಣ ಸಣ್ಣ ಸಾಧನೆಯನ್ನು ಪ್ರೋತ್ಸಾಹಿಸುವುದು ಮಕ್ಕಳಲ್ಲಿ ಆತ್ವವಿಶ್ವಾಸವನ್ನು ತುಂಬುತ್ತದೆ. ಮುಖ್ಯವಾಗಿ ಮಕ್ಕಳ ಮುಂದೆ ಪೋಷಕರು ಮೊಬೈಲ್ ಬಳಕೆ ಕಡಿಮೆ ಮಾಡಬೇಕಿದೆ ಎಂದರು.


ಸೇವಾ ಸಂಗಮ ಶಿಶುಮಂದಿರದಂತಹ ಸಂಸ್ಥೆಗಳು ಕೇವಲ ಅಕ್ಷರ ಜ್ಞಾನವನ್ನಷ್ಟೇ ಅಲ್ಲದೆ, ನಮ್ಮ ಮಣ್ಣಿನ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಮಕ್ಕಳಿಗೆ ಧಾರೆ ಎರೆಯುತ್ತಿವೆ. ಸಣ್ಣ ವಯಸ್ಸಿನಲ್ಲೇ ಹಿರಿಯರಿಗೆ ಗೌರವ ಕೊಡುವುದು, ಶಿಸ್ತಿನ ಜೀವನ ನಡೆಸುವುದು ಶಿಶುಮಂದಿರದಲ್ಲಿ ಮಗು ಕಲಿಯುವ ದೊಡ್ಡ ಪಾಠ. ಇದು ಮಗುವಿನ ವ್ಯಕ್ತಿತ್ವ ವಿಕಸನಕ್ಕೆ ಅಡಿಪಾಯವಾಗಿದೆ ಎಂದರು.

ಬೈಂದೂರು ಸೇವಾ ಸಂಗಮ ಶಿಶುಮಂದಿರದ ಅಧ್ಯಕ್ಷ ಮಂಜುನಾಥ ಶೆಟ್ಟಿ ಅವರು ಮಾತನಾಡಿ, ಕಳೆದ 42 ವರ್ಷಗಳಿಂದ ಸೇವಾ ಸಂಗಮದ ಮೂಲಕ ಗುಣಾತ್ಮಕ ಶಿಕ್ಷಣ ನೀಡುತ್ತಾ ಬರಲಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿನ ಅಂಕಗಳ ಮಾಪನವನ್ನು ಮುಖ್ಯವಾಗಿರಿಸದೇ ಪ್ರತಿ ಮಗುವಿನಲ್ಲಿಯೂ ಮೌಲ್ಯವನ್ನು ತುಂಬು ಕಾರ್ಯ ಮಾಡಲಾಗಿದೆ ಎಂದರು.
ಈ ವೇಳೆ ಸೇವಾ ಸಂಗಮ ಶಿಶುಮಂದಿರದ ಕಾರ್ಯದರ್ಶಿ ರಾಜೇಶ್ ಐತಾಳ್, ಮಾತಾಜಿಯರಾದ ಸುಜಾತಾ, ಸೌಮ್ಯ ಉಪಸ್ಥಿತರಿದ್ದರು. ಶಿಶುಮಂದಿರದ ವಿದ್ಯಾರ್ಥಿಗಳು ಪ್ರಾರ್ಥನೆ, ಶ್ಲೋಕ, ಉಕ್ತಿಗಳನ್ನು ಪಠಿಸಿದರು. ಸಮಿತಿಯ ಸದಸ್ಯೆ ಆಶಾ ದಿನೇಶ್ ಕಾರ್ಯಕ್ರಮ ನಿರೂಪಿಸಿದರು. ಸೇವಾ ಸಂಗಮದ ಮಾತೆಯರಾದ ಅಶ್ವಿನಿ ಆಚಾರ್ಯ ಸ್ವಾಗತಿಸಿ, ವಿನೋದಾ ವಂದಿಸಿದರು.
















