ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಬಾಲಕಾರ್ಮಿಕ ಪದ್ಧತಿಯು ಸಮಾಜದ ಅನಿಷ್ಠ ಪದ್ಧತಿಗಳಲ್ಲಿ ಒಂದಾಗಿದ್ದು, ಇದು ಮಕ್ಕಳು ತಮ್ಮ ಬಾಲ್ಯಾವಸ್ಥೆಯನ್ನು ಸವಿಯುವುದನ್ನು ಮೊಟಕುಗೊಳಿಸುವುದರ ಜೊತೆಗೆ ಶಿಕ್ಷಣ ವಂಚಿತರನ್ನಾಗಿ ಮಾಡುತ್ತದೆ. ಬಾಲಕಾರ್ಮಿಕ ಪದ್ಧತಿಯನ್ನು ತಳ ಮಟ್ಟದಲ್ಲಿ ನಿರ್ಮೂಲನೆ ಮಾಡುವ ಮೂಲಕ ಉಡುಪಿಯನ್ನು ಬಾಲ ಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸಲು ಪ್ರತಿಯೊಬ್ಬರೂ ಪಣ ತೊಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಮ್. ಪುರುಷೋತ್ತಮ್ ಹೇಳಿದರು.
ಅವರು ಶುಕ್ರವಾರ ನಗರದ ಮಣಿಪಾಲದ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ತಮ್ಮ ಬಾಲ್ಯವನ್ನು ಮುಕ್ತವಾಗಿ ಅನುಭವಿಸಲು ಹಾಗೂ ಅವರುಗಳ ರಕ್ಷಣೆಗಾಗಿ ಸಂವಿಧಾನವು ಅನೇಕ ಕಾನೂನು ಹಾಗೂ ಕಾಯಿದೆಗಳನ್ನು ಜಾರಿಗೆ ತಂದಿದ್ದು, ಮಕ್ಕಳು ಇದರಿಂದ ವಂಚಿತರಾಗಬಾರದು. ಇಂದಿಗೂ ಸಹ ನಾವು ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾ ಆಚರಿಸುತ್ತಿರುವುದು ನೋಡಿದರೆ ಈ ಪದ್ಧತಿ ಇನ್ನು ಮುಂದುವರೆಯುತ್ತಿರುವುದು ವಿಷಾಧನೀಯ ಸಂಗತಿಯಾಗಿದೆ. ಪೋಷಕರು ಮಕ್ಕಳ ಜೀವನವನ್ನು ರೂಪಿಸುವ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸದೇ ಇದ್ದಲ್ಲಿ ಬಾಲಕಾರ್ಮಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುತ್ತದೆ. ಪೋಷಕರು ಹೀಗಾಗದಂತೆ ಎಚ್ಚರವಹಿಸಬೇಕು. ಬಾಲ್ಯದಿಂದಲೇ ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದರೊಂದಿಗೆ ಅವರ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲು ನೆರವಾಗಬೇಕಿದೆ ಎಂದರು.
ಬಾಲಕಾರ್ಮಿಕರಾಗಿ ದುಡಿಯುತ್ತಿರುವ ಮಕ್ಕಳು ಬಂದ ಹಣದಿಂದ ತಂಬಾಕು, ಧೂಮಪಾನ ಸೇರಿದಂತೆ ಮಾದಕ ವ್ಯಸನಕ್ಕೆ ತುತ್ತಾಗಿ, ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಬಡತನ ಇದ್ದರೂ ಸಹ ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದ ಅವರು, ಬಾಲ ಕಾರ್ಮಿಕ ಪದ್ಧತಿಯ ದುಷ್ಪರಿಣಾಮಗಳ ಬಗ್ಗೆ ನಿರಂತರವಾಗಿ ಅರಿವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಬಾಲ ಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸಲು ಇಲಾಖೆಗಳೊಂದಿಗೆ ಪೋಷಕರು ಸಹಕಾರ ನೀಡಬೇಕು ಎಂದರು.
ಕರಾವಳಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿ, ಮಕ್ಕಳ ಬಾಲ್ಯವನ್ನು ರಕ್ಷಿಸಿ, ಅವರುಗಳಿಗೆ ಶಿಕ್ಷಣ ನೀಡುವುದರೊಂದಿಗೆ ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡುವುದು ಈ ದಿನದ ಮುಖ್ಯ ಉದ್ದೇಶವಾಗಿದ್ದು, 14 ವರ್ಷದೊಳಗಿನ ಯಾವುದೇ ಮಗುವು ಹೋಟೆಲ್, ಕಾರ್ಖಾನೆ ಸೇರಿದಂತೆ ಮತ್ತಿತರ ಕಡೆಗಳಲ್ಲಿ ದುಡಿಯುತ್ತಿರುವುದು ಕಂಡುಬಂದಲ್ಲಿ ಅವರುಗಳ ಮನವೊಲಿಸಿ, ಶಿಕ್ಷಣ ಪಡೆಯುವಂತೆ ಮಾಡಬೇಕು. ದೇಶದಲ್ಲಿ ಯುವಜನತೆಯ ಸಂಖ್ಯೆ ಹೆಚ್ಚಿದ್ದು, ಯುವಸಂಪತ್ತಿನಿಂದ ದೇಶದ ಅಭಿವೃದ್ಧಿ ಸಾಧ್ಯವಿದೆ. ಈ ನಿಟ್ಟಿನಲ್ಲಿ ಯುವ ಸಂಪನ್ಮೂಲವನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆಯ ಅಂಗವಾಗಿ ಪ್ರತಿಜ್ಞಾ ವಿಧಿ ಭೋಧಿಸಿ ಮಾತನಾಡಿ, 14 ವರ್ಷದೊಳಗಿನ ಮಕ್ಕಳನ್ನು ದುಡಿಮೆಗೆ ನಿಯೋಜಿಸುವುದು ಹಾಗೂ 14 ರಿಂದ 18 ವರ್ಷದೊಳಗಿನ ಯಾವುದೇ ಮಕ್ಕಳನ್ನು ಅಪಾಯಕಾರಿ ಕೈಗಾರಿಕೆಗಳು ಅಥವಾ ಉದ್ದಿಮೆಗಳಲ್ಲಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಶಾಲೆಯಿಂದ ಹೊರಗುಳಿದ ಹೆಚ್ಚಿನ ಮಕ್ಕಳು ಇಂದು ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಯಾವುದೇ ಮಗು ಬಾಲಕಾರ್ಮಿಕ ಪದ್ಧತಿಗೆ ಬಲಿಯಾಗುತ್ತಿದ್ದರೆ ಅಥವಾ ದುಡಿಯುತ್ತಿರುವುದು ಕಂಡುಬಂದಲ್ಲಿ ಕಾರ್ಮಿಕ ಇಲಾಖೆಗೆ ಅಥವಾ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಅಥವಾ 112 ಗೆ ಕರೆ ಮಾಡಿ ಮಾಹಿತಿ ನೀಡಬೇಕು. ಸಂಬಂಧಪಟ್ಟ ಇಲಾಖೆಯವರು ಆ ಮಗುವನ್ನು ರಕ್ಷಿಸಿ, ಶಿಕ್ಷಣದೊಂದಿಗೆ ಪುನರ್ವಸತಿ ಕಲ್ಪಿಸಲಿದ್ದಾರೆ ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಫ್ ಅಹಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಛೇಂಬರ್ ಆಫ್ ಕಾಮರ್ಸ್ನ ಪ್ರಧಾನ ಕಾರ್ಯದರ್ಶಿ ಡಾ. ವಿಜೇಂದ್ರ ಮಾತನಾಡಿದರು.
ಇದೇ ಸಂದರ್ಭದಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಮತ್ತು ತಿದ್ದುಪಡಿ ಕಾಯ್ದೆ 2016 ರ ಕುರಿತು, ವಿ ಹೆಲ್ಪ್ ಟ್ರಸ್ಟ್ ರಿ. ಅಲಂಗಾರ್, ಮೂಡಬಿದ್ರಿ ಇವರಿಂದ ಬೀದಿ ನಾಟಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಕೈಗಾರಿಕಾ ಇಲಾಖೆಯ ಉಪನಿರ್ದೇಶಕ ಸೀತಾರಾಮ ಶೆಟ್ಟಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕಿ ಅಮೃತ, ತಾಲೂಕು ಕಾರ್ಮಿಕ ವೃತ್ತ ನಿರೀಕ್ಷಕರುಗಳು, ಆಶಾ-ಅಂಗನವಾಡಿ ಕಾರ್ಯಕರ್ತೆಯರು, ವಿದ್ಯಾರ್ಥಿಗಳು, ಇಲಾಖೆಯ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಕಳ ವೃತ್ತ ಕಾರ್ಮಿಕ ನಿರೀಕ್ಷಕ ನವೀನ್ ಕುಮಾರ್ ಸಿ.ಹೆಚ್. ಸ್ವಾಗತಿಸಿ, ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿ, ಕುಂದಾಪುರ ವೃತ್ತ ಕಾರ್ಮಿಕ ನಿರೀಕ್ಷಕ ವಿಜೇಂದ್ರ ಕೆ. ವಂದಿಸಿದರು.

















