ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಿರಿಯ ಪತ್ರಿಕೋದ್ಯಮಿ, ಸಾಹಿತಿ, ಸಂಘಟಕ, “ಕುಂದಪ್ರಭ” ವಾರ ಪತ್ರಿಕೆಯ ಸಂಪಾದಕ ಕುಂಭಾಸಿ ನಿವಾಸಿ ಯು. ಸುರೇಂದ್ರ ಶೆಣೈ (ಯು. ಎಸ್. ಶೆಣೈ, ಗಂಗೊಳ್ಳಿ) ಅವರನ್ನು ಕುಂದಾಪುರ ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನ “ನುಡಿ ಬೆಳಕು 2026” ರ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರ ಉಪಸ್ಥಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕುಂದಾಪುರದ ಅಧ್ಯಕ್ಷ ಡಾ| ಉಮೇಶ ಪುತ್ರನ್ ಈ ಆಯ್ಕೆಯನ್ನು ಘೋಷಿಸಿದ್ದಾರೆ.
ಸಾಹಿತ್ಯ ಪ್ರೇರಕರಾಗಿದ್ದು, ಹಲವಾರು ಸಾಹಿತ್ಯ ಕಾರ್ಯಕ್ರಮಗಳನ್ನು ಸಂಘಟಿಸಿ, ನೂರಾರು ಯುವ ಪ್ರತಿಭೆಗಳಿಗೆ ಸಾಹಿತ್ಯ ಕ್ಷೇತ್ರದಲ್ಲಿ ಮುನ್ನಡೆಯಲು ಮಾರ್ಗದರ್ಶನ, ಸ್ಫೂರ್ತಿ ನೀಡಿರುವ ಯು. ಎಸ್. ಶೆಣೈಯವರು ಕುಂದಾಪುರ ತಾಲೂಕಿನ ಭಾಷೆ, ಸಾಹಿತ್ಯ, ಸಂಸ್ಕೃತಿಯ ಉಳಿವಿಗಾಗಿ ಸಾಕಷ್ಟು ಶ್ರಮಿಸಿದವರು. ಬರಹಗಾರರ ಸಮ್ಮಿಲನಗಳ ಮೂಲಕ ಕುಂದಾಪುರ ತಾಲೂಕಿನ ಬರಹಗಾರರನ್ನು ಒಗ್ಗೂಡಿಸುತ್ತಾ ಬಂದಿದ್ದಾರೆ. “ಸಾಹಿತ್ಯ ಸಪ್ತಾಹ”, “ಕನ್ನಡ ಡಿಂಡಿಮ”, “ಪುಸ್ತಕ ಉತ್ಸವ”, “ನುಡಿ ಬೆಳಕು” ಮುಂತಾದ ನಿರಂತರ ಕಾರ್ಯಕ್ರಮಗಳ ಮೂಲಕ ಸಾಹಿತ್ಯ ಚಟುವಟಿಕೆ ನಡೆಸಿದವರು.
“ಕುಂದ ಕನ್ನಡ ಭಾಷಾಭಿವೃದ್ಧಿ ವೇದಿಕೆ”ಯ ಸಂಚಾಲಕರಾಗಿರುವ ಇವರು ಕುಂದಾಪ್ರ ಕನ್ನಡ ಭಾಷೆ ಉಳಿಸಿ ಬೆಳೆಸಲು ಕಳೆದ ೪ ದಶಕಗಳಿಂದ ಹಿರಿಯರಿಗೆ, ಕಿರಿಯರಿಗೆ ಪ್ರೇರಣೆ ನೀಡುತ್ತಾ ಬರುತ್ತಿದ್ದಾರೆ.
ಜೂನ್ 28 ರಂದು ಕುಂಭಾಸಿ ಆನೆಗುಡ್ಡೆ ಕ್ಷೇತ್ರದಲ್ಲಿ ಶ್ರೀ ವಿನಾಯಕ ಸಭಾ ಭವನದಲ್ಲಿ ಇವರು 20ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಸಭೆಯಲ್ಲಿ ಉಡುಪಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರ ಕುಮಾರ್ ಕೋಟ, ಖಜಾಂಚಿ ಮನೋಹರ ಭಟ್, ಕುಂದಾಪುರ ಕಸಾಪ ಪ್ರಧಾನ ಕಾರ್ಯದರ್ಶಿ ದಿನಕರ ಆರ್. ಶೆಟ್ಟಿ, ಖಜಾಂಚಿ ಮಂಜುನಾಥ ಕೆ. ಎಸ್. ಹಾಗೂ ಕಾರ್ಯದರ್ಶಿ ಅಕ್ಷತಾ ಗಿರೀಶ್ ಉಪಸ್ಥಿತರಿದ್ದರು.

















