ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮುಗ್ಧತೆಯಿಂದ ಪ್ರೌಢತೆಯತ್ತ ಸಾಗುವ ಸ್ಥಿತ್ಯಂತರದ ಅವಧಿಯಲ್ಲಿರುವ ವಿದ್ಯಾರ್ಥಿಗಳು ಸರಿ-ತಪ್ಪುಗಳ ಬಗ್ಗೆ ನಿಖರವಾದ ತಿಳುವಳಿಕೆಯನ್ನು ಪಡೆಯುತ್ತಿರಬೇಕು. ಅಲ್ಲದಿದ್ದರೆ, ಒಂದು ಕೆಟ್ಟ ಸಹವಾಸ, ಒಂದು ತಪ್ಪು ನಡವಳಿಕೆ, ಒಂದು ವ್ಯಸನ ಬದುಕಿಗೇ ಅಪಾಯಕಾರಿಯಾಗಬಹುದು. ಆದ್ದರಿಂದ ಪ್ರತಿಯೊಬ್ಬರಲ್ಲಿ ವಿದ್ಯೆಯ ಜೊತೆಗೆ ವಿವೇಕವೂ ಇರಬೇಕು ಎಂದು ಕುಂದಾಪುರ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಸುಬ್ರಹ್ಮಣ್ಯ ಶೆಟ್ಟಿ ಹೇಳಿದರು.
ಅವರು ಇಲ್ಲಿನ ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ- ಸ್ವಸಹಾಯ ಸಂಘ ಗಳ ಆಶ್ರಯದಲ್ಲಿ ಆಯೋಜಿಸಲಾದ ‘ ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ -ಸ್ವಸಹಾಯ ಸಂಘಗಳು, ಕುಂದಾಪುರ ಘಟಕ- ಇದರ ಅಧ್ಯಕ್ಷರಾದ ಉಮೇಶ್ ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಸ್ವಸಹಾಯ ಸಂಘಗಳಿಂದ ದೊರೆಯುವ ವಿವಿಧ ವಿದ್ಯಾರ್ಥಿ ವೇತನಗಳ ಬಗ್ಗೆ ಮಾಹಿತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ನವೀನ ಕುಮಾರ ಶೆಟ್ಟಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅರ್ಥಶಾಸ್ತ್ರ ಉಪನ್ಯಾಸಕಿ ನಾಗರತ್ನಾ ಅವರು ಪ್ರಾರ್ಥನೆ ಮಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಂದಾಪುರ ಘಟಕದ ವ್ಯವಸ್ಥಾಪನಾಧಿಕಾರಿ ನಾಗರತ್ನಾ ಅವರು ಸ್ವಾಗತಿಸಿದರು. . ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಕೃಷ್ಣಮೂರ್ತಿ ಡಿ.ಬಿ ಅವರು ಕಾರ್ಯಕ್ರಮ ನಿರ್ವಹಿಸಿದರು.











