ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಉಪ್ಪುಂದದ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಪ್ರಧಾನ ಕಛೇರಿಗೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ತ್ಯಾಗಟೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು, ನಿರ್ದೇಶಕರು, ಸಿ.ಇ.ಓ ಮತ್ತು ಸಿಬ್ಬಂದಿ ವರ್ಗದವರು ಸಹಿತ ನಿಯೋಗವು ಸಂಘಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅವರು ಉಪಸ್ಥಿತರಿದ್ದು ನಿಯೋಗವನ್ನು ಬರಮಾಡಿಕೊಂಡರು ಮತ್ತು ಸಂಘದ ಕಾರ್ಯ ವೈಕರಿ ಹಾಗೂ ಅಭಿವೃದ್ಧಿಯ ಬಗ್ಗೆ ಪರಿಚಯಿಸಿದರು. ಸಂಘವು ವರದಿ ವರ್ಷದಲ್ಲಿ ರೂ. 1500 ಕೋಟಿಗೂ ಮಿಕ್ಕಿ ವಾರ್ಷಿಕ ವ್ಯವಹಾರ ನಡೆಸುವುದರೊಂದಿಗೆ ರೂ. 7 ಕೋಟಿಗೂ ಮಿಕ್ಕಿ ವಾರ್ಷಿಕ ಲಾಭ ಗಳಿಸಲು ಸಹಕರಿಸಿದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.
ಸಂಘವು ಈಗಾಗಲೇ ಕೈಗೊಂಡಿರುವ ರೈತ ಸಿರಿ ಅಗ್ರಿಮಾಲ್ ಇದರ ಕಟ್ಟಡ ಕಾಮಗಾರಿಯು ಮುಕ್ತಾಯ ಹಂತದಲ್ಲಿದ್ದು ಮುಂದಿನ ವ್ಯವಹಾರ ಅಭಿವೃದ್ಧಿಯ ಬಗ್ಗೆ ಹಾಗೂ ಒಳ ವಿನ್ಯಾಸ ಇತ್ಯಾದಿ ಕಾಮಗಾರಿ ಶೀಘ್ರದಲ್ಲಿ ಕೈಗೊಂಡು ಸದಸ್ಯರಿಗೆ ಸೇವೆಯನ್ನು ನೀಡಲಿಕ್ಕೆ ಕಾರ್ಯೋನ್ಮುಖ ರಾಗಿದ್ದೇವೆ ಎಂದು ತಿಳಿಸಿದರು.
ತ್ಯಾಗಟೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರಾದ ಚಿದಂಬರ ಇವರು ನಮ್ಮ ಸಂಘದ ಅಭಿವೃದ್ಧಿ ಮತ್ತು ಕಾರ್ಯ ಯೋಜನೆಯನ್ನು ಶ್ಲಾಘಿಸಿದರು ಮತ್ತು ಸಂಘದ ವತಿಯಿಂದ ನಿಯೋಗವನ್ನು ಸಂಘದ ಅಧ್ಯಕ್ಷರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಸಂಘದ ಸಿ.ಇ.ಓ ವಿಷ್ಣು ಪೈ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
















