ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಸೈಂಟ್ ಥಾಮಸ್ ಶಾಲೆಯ ಕಿಂಡರ್ ಗಾರ್ಟನ್ ಪುಟಾಣಿಗಳಿಂದ ರೈತರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮವನ್ನು ಶಾಲೆಯ ಗೌರವಾನ್ವಿತ ಪ್ರಾಂಶುಪಾಲರಾದ ವಂದನೀಯ ಫಾದರ್ ಫಿಲಿಪ್ ನೆಲ್ಲಿವಿಳಾ ಮತ್ತು ಕಿಂಡರ್ ಗಾರ್ಟನ್ ಮುಖ್ಯ ಶಿಕ್ಷಕಿ ಸಿಸ್ಟರ್ ಸೋಫಿಯಾ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ರೈತರ ಮಹತ್ವವನ್ನು ಸಾರುವ ವಿಶೇಷ ಸಂದೇಶ ನೀಡಲಾಯಿತು. ರೈತರು ದೇಶದ ಅನ್ನದಾತರು, ಅವರ ಪರಿಶ್ರಮದಿಂದಲೇ ಪ್ರತಿಯೊಬ್ಬರ ಬದುಕು ಸಾಗುತ್ತಿದೆ ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಪುಟಾಣಿ ಮಕ್ಕಳು ರೈತರ ವೇಷ ಧರಿಸಿ, ಕೃಷಿ ಉಪಕರಣಗಳೊಂದಿಗೆ ಮೆರವಣಿಗೆ ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ರೈತರ ಜೀವನ, ಕೃಷಿಯ ಮಹತ್ವ ಹಾಗೂ ಪ್ರಕೃತಿ ಸಂರಕ್ಷಣೆಯ ಕುರಿತು ಹಾಡು, ನೃತ್ಯ ಹಾಗೂ ಭಾಷಣಗಳ ಮೂಲಕ ಮಕ್ಕಳು ಮನಮುಟ್ಟುವ ಸಂದೇಶವನ್ನು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉಪಪ್ರಾಂಶುಪಾಲೆ ಸಿಸ್ಟರ್ ಕಾರ್ಮೆಲ್ “ರೈತರ ಪರಿಶ್ರಮವನ್ನು ಸದಾ ಗೌರವಿಸಬೇಕು. ಅನ್ನ ಬೆಳೆಯುವ ರೈತರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ” ಎಂದು ಹೇಳಿದರು. ಸಿಸ್ಟರ್ ಸೋಫಿಯಾ ಅವರು ಮಕ್ಕಳಲ್ಲಿ ಕೃಷಿಯ ಬಗ್ಗೆ ಗೌರವ ಹಾಗೂ ಪ್ರಕೃತಿಯ ಬಗ್ಗೆ ಪ್ರೀತಿ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷಕ-ಶಿಕ್ಷಕಿಯರು, ಸಹಾಯಕ ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು. ಶಾಲಾ ಆವರಣದಲ್ಲಿ ರೈತರ ದಿನದ ವಿಶೇಷ ಸಂದೇಶಗಳನ್ನು ಒಳಗೊಂಡ ಫಲಕಗಳನ್ನು ಪ್ರದರ್ಶಿಸಲಾಗಿತ್ತು. ಮಕ್ಕಳ ಸಾಂಪ್ರದಾಯಿಕ ವೇಷಭೂಷಣ ಹಾಗೂ ಸೃಜನಾತ್ಮಕ ಪ್ರದರ್ಶನಗಳು ಕಾರ್ಯಕ್ರಮದ ಆಕರ್ಷಣೆಯಾಗಿದ್ದವು.
ಕಾರ್ಯಕ್ರಮದ ಕೊನೆಯಲ್ಲಿ ರೈತ ಸಮುದಾಯಕ್ಕೆ ಕೃತಜ್ಞತೆ ಸಲ್ಲಿಸಿ, “ರೈತ ಉಳಿದರೆ ದೇಶ ಉಳಿಯುತ್ತದೆ”ಎಂಬ ಸಂದೇಶದೊಂದಿಗೆ ಎಲ್ಲರೂ ರೈತರನ್ನು ಗೌರವಿಸುವ ಪ್ರತಿಜ್ಞೆ ಕೈಗೊಂಡರು. ಈ ಆಚರಣೆಯು ವಿದ್ಯಾರ್ಥಿಗಳಲ್ಲಿ ರೈತರ ಬಗ್ಗೆ ಗೌರವ, ಕೃತಜ್ಞತೆ ಹಾಗೂ ಕೃಷಿಯ ಮಹತ್ವದ ಕುರಿತು ಉತ್ತಮ ಅರಿವು ಮೂಡಿಸಿತು ಕಾರ್ಯ ಕ್ರಮವನ್ನು. ಶಿಕ್ಷಕಿ ಮರಿಯಮ್ಮ ಬೋಸ್ ನಿರೂಪಿಸಿ, ವಂದಿಸಿದರು.
















