ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಜೀವನದಲ್ಲಿ ಕನಸು ಮತ್ತು ಗುರಿ ಇರಿಸಿ ಮುನ್ನಡೆದರೆ ಯಶಸ್ಸು ತಾನಾಗಿಯೇ ಒಲಿದು ಬರುತ್ತದೆ ಎಂದು ಶ್ರೀ ಕೃಷ್ಣಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಮುಖ್ಯಸ್ಥ ಸಂಪತ್ ಕುಮಾರ್ ಶೆಟ್ಟಿ ಹೇಳಿದರು.
ಅವರು ಇಲ್ಲಿನ ಕೋಟದ ಕಾರಂತ ಥೀಮ್ ಪಾರ್ಕ್‌ನಲ್ಲಿ ಭಾನುವಾರ ವಿ-ಶೈನ್ ಕೋಚಿಂಗ್ ಸೆಂಟರ್ ಕೋಟ ಮತ್ತು ರೋಟರಿ ಕ್ಲಬ್ ಸಾಹೇಬರಕಟ್ಟೆ ಇವರ ಜಂಟಿ ಆಶ್ರಯದಲ್ಲಿ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗಾಗಿ ವಿಶೇಷ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರತಿಯೊರ್ವರು ಆತ್ಮ ಸ್ಥೈರ್ಯದ ಜೊತೆಗೆ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನಸ್ಥಿತಿಯನ್ನು ಸೃಷ್ಠಿಸಿಕೊಳ್ಳಬೇಕು, ಜೀವನದಲ್ಲಿ ಯಶಸ್ವಿಯಾಗುತ್ತಾ ಹೊದಾಗ ಕಾಲೇಳೆಯುವ ಮನಸ್ಥಿತಿಯ ವ್ಯಕ್ತಿಗಳು ಎದುರಾಗುತ್ತಾರೆ ಅವರನ್ನು ನಿರ್ಲಕ್ಷಿಸಿ ಮುನ್ನಡೆಯಬೇಕು.
ನಮ್ಮ ಜೀವನದಲ್ಲಿ ಸ್ವಾಮೀ ವಿವೇಕಾನಂದರು, ಅಬ್ದುಲ್ ಕಲಾಂ ಅಂತಹ ವ್ಯಕ್ತಿಗಳು ರೋಲ್ ಮಾಡೆಲ್ ಆಗಿ ತೆಗೆದುಕೊಳ್ಳಬೇಕು. ಅತ್ಯಂತ ಕಠಿಣ ಸಂದರ್ಭದಲ್ಲೂ ಹಿಂಜರಿಯದೆ ಸ್ಪಷ್ಟ ಧ್ಯೇಯೋದ್ದೇಶದೊಂದಿಗೆ ಸಾಧನೆಯ ಪಥವನ್ನೆರಬೇಕು ಎಂದರಲ್ಲದೆ ವಿ. ಶೈನ್ ಕೊಚಿಂಗ್ ಸೆಂಟರ್ ಅವರ ಸ್ವಾರ್ಥಕ್ಕೆ ಬಳಸಿಕೊಳ್ಳದೆ ಸಮಾಜದ ಯುವ ಸಮುದಾಯದ ಕಣ್ಣುಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಇದು ಶ್ಲಾಘನೀಯ ಕಾರ್ಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕಾರ್ಯಾಗಾರವನ್ನು ಪೋಲಿಸ್ ಇಲಾಖೆಯ ಅಮವಾಸ್ಯೆಬೈಲು ಠಾಣಾಧಿಕಾರಿ ಸುಧಾರಾಣಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಸಾಹೇಬರಕಟ್ಟೆ ಅಧ್ಯಕ್ಷ ಅಲ್ತಾರ್ ಗೌತಮ್ ಹೆಗ್ಡೆ ವಹಿಸಿದರು. ಮುಖ್ಯ ಅಭ್ಯಾಗತರಾಗಿ ರೋಟರಿ ಕ್ಲಬ್ ಸಹಾಯಕ ಗವರ್ನರ್ ವಿಜಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ವಲಯ ಅರಣ್ಯ ಇಲಾಖಾಧಿಕಾರಿ ಸಂದೇಶ್ ಕುಮಾರ್ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅಥವಾ ಅದರಲ್ಲಿ ಆಯ್ಕೆಯಾಗುವ ಕುರಿತಾಗಿ ಸಮಗ್ರ ಮಾಹಿತಿ ನೀಡಿದರು. ವರದರಾಜ್ ಶೆಟ್ಟಿ ಸ್ವಾಗತಿಸಿದರೆ, ಕಾರ್ಯಕ್ರಮ ಸಂಯೋಜಕ ಹರೀಷ್ ಕುಮಾರ್ ಶೆಟ್ಟಿ ಪ್ರಾಸ್ತಾವನೆ ಸಲ್ಲಿಸಿ ನಿರೂಪಿಸಿ, ವಿವೇಕ್ ಅಮೀನ್ ವಂದಿಸಿ, ಗಿರೀಶ್ ಕುಮಾರ್ ಶೆಟ್ಟಿ ಸಹಕರಿಸಿದರು.
ಕಾರ್ಯಾಗಾರದ ವಿಶೇಷ:
ಸಿವಿಲ್ ಮತ್ತು ಡಿ.ಎ.ಆರ್ (ಆಂಖ) ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಅಭ್ಯರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ’ಅಣಕು ಪರೀಕ್ಷೆಯ ಕಾರ್ಯಾಗಾರ (Mock exam workshop) ನಡೆಯಿತು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಗ್ರಾಮೀಣ ಹಾಗೂ ಸ್ಥಳೀಯ ಭಾಗದ ಅಭ್ಯರ್ಥಿಗಳು ಪರೀಕ್ಷಾ ವಿಧಾನವನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಈ ಕಾರ್ಯಾಗಾರ ವೇದಿಕೆ ಕಲ್ಪಿಸಿತು.ಸಾಕಷ್ಟು ಯುವ ಸಮುದಾಯ ಈ ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡರು.
















